PhonePe Blogs Main Featured Image

Trust & Safety

ಸೈಬರ್ ವಂಚನೆಯಿಂದ ನಿಮ್ಮ ಕುಟುಂಬವನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ 4 ಪ್ರಮುಖ ಕ್ರಮಗಳು

PhonePe Regional|3 min read|20 January, 2026

URL copied to clipboard

ಇಂದಿನ ಸಮಾಜ ವ್ಯವಸ್ಥೆಯಲ್ಲಿ ವಂಚನೆಯ ವಿಷಯದ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ, ಸುತ್ತಲೂ ಇರುವ ಪ್ರತಿಯೊಬ್ಬರೂ ತಮ್ಮದೇ ಆದ ಕಥೆಯನ್ನು ಹೊಂದಿರುತ್ತಾರೆ. ಹಣ ಕಳೆದುಕೊಂಡ ಆಂಟಿ ಅಥವಾ ಅನುಮಾನಾಸ್ಪದ ಫೋನ್ ಕರೆಯನ್ನು ಸ್ವೀಕರಿಸಿದ ಅಂಕಲ್‌, ತಕ್ಷಣ ಅದನ್ನು ಮೋಸದ ಫೋನ್ ಕರೆ ಎಂದು ಗುರುತಿಸಿ ಕರೆಯ ಸಂಪರ್ಕವನ್ನು ಕಡಿತಗೊಳಿಸಿರುವುದು. ಇಂತಹ ಸಂದರ್ಭಗಳನ್ನು ನಾವು ಗಮನಿಸಿರುತ್ತೇವೆ.

ಇದು ನಾವು ಬದುಕುತ್ತಿರುವ ವಾಸ್ತವ ಪರಿಸ್ಥಿತಿ. ಅಧಿಕಾರಿಗಳು, ಕಾನೂನು ಜಾರಿ ಸಂಸ್ಥೆಗಳು ಮತ್ತು ಇತರ ಪ್ರಮುಖ ಪಾಲುದಾರರ ನಿರಂತರ ಪ್ರಯತ್ನಗಳಿಂದ, ಈ ವರ್ಷ ವಂಚನೆಯನ್ನು ಕಡಿಮೆ ಮಾಡುವಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ. ಸರ್ಕಾರದ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ, ಭಾರತವು ಹಣಕಾಸು ವರ್ಷ 2024 ರಲ್ಲಿ 1,087 ಕೋಟಿ ರೂ.ಗಳ ಮೊತ್ತದ 13.42 ಲಕ್ಷ UPI ವಂಚನೆ ಘಟನೆಗಳಿಗೆ ಸಾಕ್ಷಿಯಾಗಿತ್ತು. ಇದು ಹಣಕಾಸು ವರ್ಷ 25 ರಲ್ಲಿ 12.64 ಲಕ್ಷಕ್ಕೆ ಇಳಿದು 981 ಕೋಟಿ ರೂ.ಗಳಷ್ಟಾಗಿದೆ.

ಈ ಪರಿಸ್ಥಿತಿಯನ್ನೇ ಮುಂದುವರಿಸಿಕೊಂಡು ಹೋಗಲು, ನಿಮ್ಮ ಕುಟುಂಬವನ್ನು ಸೈಬರ್ ಬೆದರಿಕೆಗಳಿಂದ ರಕ್ಷಿಸುವುದಕ್ಕಾಗಿ ಸಹಾಯ ಮಾಡುವ ಸಮಗ್ರ ಮಾರ್ಗದರ್ಶಿಯೊಂದಿಗೆ ನಾವು ಈ ವರ್ಷವನ್ನು ಪ್ರಾರಂಭಿಸುತ್ತಿದ್ದೇವೆ.

1. ಬೆದರಿಕೆಯನ್ನು ಅರ್ಥಮಾಡಿಕೊಳ್ಳುವುದು

ಡಿಜಿಟಲ್ ವಂಚನೆಯು ಫಿಶಿಂಗ್, ಗುರುತನ್ನು ಕಳವು ಮಾಡುವುದು ಮತ್ತು ನಿಮ್ಮ ಸಾಧನದಲ್ಲಿ ಮಾಲ್‌ವೇರ್ ಅನ್ನು ಪರಿಚಯಿಸುವಂತಹ ವಿವಿಧ ತಂತ್ರಗಳನ್ನು ಒಳಗೊಂಡಿದೆ. ವಂಚಕರು ಪಾಸ್‌ವರ್ಡ್‌ಗಳು ಅಥವಾ ಬ್ಯಾಂಕಿಂಗ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವಂತೆ ವ್ಯಕ್ತಿಗಳನ್ನು ಪ್ರೇರೇಪಿಸುತ್ತಾರೆ. ಆ ಮೂಲಕ ಮೋಸ ಮಾಡಲು ವಂಚನೆಯಿಂದ ಕೂಡಿದ ಇಮೇಲ್‌ಗಳು, ಪಠ್ಯ ಸಂದೇಶಗಳು ಮತ್ತು ಫೋನ್ ಕರೆಗಳಂತಹ ಮಾಧ್ಯಮವನ್ನು ಬಳಸುತ್ತಾರೆ.

2. ಸಾಮಾನ್ಯವಾಗಿರುವ ಸ್ಕ್ಯಾಮ್‌ಗಳನ್ನು ಗುರುತಿಸುವುದು

ಕೆಲವು ವಂಚನೆಯ ತಂತ್ರಗಳು ಸಾಮಾನ್ಯವಾಗಿರುತ್ತವೆ, ಇನ್ನು ಕೆಲವು ಹೊಸದಾಗಿರುತ್ತವೆ. ಆದರೂ, ಈ ಎಲ್ಲ ವಿಧಾನಗಳು ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದಿರುತ್ತವೆ – ವಂಚನೆಗಳು ಸಾಮಾನ್ಯವಾಗಿ ದುರುದ್ದೇಶಪೂರಿತ ಫೋನ್ ಕರೆ, ಪಠ್ಯ ಅಥವಾ ಇ-ಮೇಲ್‌ನೊಂದಿಗೆ ಪ್ರಾರಂಭವಾಗುತ್ತವೆ. ಅನಿರೀಕ್ಷಿತವಾಗಿ ಎದುರಾಗುವ ಸಂವಹನಗಳ ಬಗ್ಗೆ ಎಚ್ಚರಿಕೆಯನ್ನು ಹೊಂದಿರಲು ನಿಮ್ಮ ಕುಟುಂಬಕ್ಕೆ ಸಹಾಯ ಮಾಡಿ.

ಎಚ್ಚರಿಕೆಯ ಕರೆಗಂಟೆಗಳು:

  • ತುರ್ತು ಪರಿಸ್ಥಿತಿಗಳು ಅಥವಾ ಬೆದರಿಕೆಗಳು: ವಂಚಕರು ಜನರಿಗೆ ಯೋಚಿಸಲೂ ಅವಕಾಶ ನೀಡದೇ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಮಾಡಲು ಭಯವನ್ನು ಸೃಷ್ಟಿಸುತ್ತಾರೆ.
  • ಸೂಕ್ಷ್ಮ ಮಾಹಿತಿಗಾಗಿ ವಿನಂತಿಗಳು: ಕಾನೂನುಬದ್ಧ ಸಂಸ್ಥೆಗಳು ಎಂದಿಗೂ ಪಾಸ್‌ವರ್ಡ್‌ಗಳು, CVS ಗಳು ಅಥವಾ OTP ಗಳನ್ನು ಕೇಳುವುದಿಲ್ಲ.
  • ಅನುಮಾನಾಸ್ಪದ ಲಿಂಕ್‌ಗಳು: ಅದು ನಿಜವಾದ ಬ್ಯಾಂಕ್ ಅಥವಾ ಸಂಸ್ಥೆಯಿಂದ ಬಂದಿದೆಯೇ ಎಂದು ನೋಡಲು ಯಾವಾಗಲೂ ಲಿಂಕ್‌ನ URL ಅನ್ನು ಪರಿಶೀಲಿಸಿ. ಕ್ಲಿಕ್‌ ಮಾಡುವ ಮೊದಲು ಅದು ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಆ ಲಿಂಕ್‌ನ ಮೇಲೆ ಕರ್ಸರ್‌ ಅನ್ನು ಇಡಿ.   
  • ನಿಮ್ಮನ್ನು ಹಣ ವಿಥ್‌ಡ್ರಾ ಮಾಡಲು, ನಿಮ್ಮ ಪೂರ್ಣ ಪಿನ್ ಅನ್ನು ಬಹಿರಂಗಪಡಿಸಲು ಅಥವಾ “ಫಿಂಗರ್‌ಪ್ರಿಂಟ್‌ ಪರಿಶೀಲನೆ”ಗಾಗಿ ಹಣವನ್ನು ಒದಗಿಸಲು ಪೊಲೀಸರು ಅಥವಾ ನಿಮ್ಮ ಬ್ಯಾಂಕ್ ಎಂದಿಗೂ ಕೇಳುವುದಿಲ್ಲ.
  • ಫೋನ್ ವಂಚನೆಗಳು: ಕರೆ ಮಾಡುವವರು ಬಂಧನದ ಬೆದರಿಕೆ ಹಾಕಿದರೆ ಅಥವಾ ನಗದು ವರ್ಗಾವಣೆಯ ಮೂಲಕ “ದಂಡ/ಫೀ” ಪಾವತಿ ಮಾಡಲು ಕೇಳಿದರೆ, ಅದು ವಂಚನೆಯಾಗಿರುತ್ತದೆ. ಅನಗತ್ಯ ಕರೆಗಳನ್ನು ಕಡಿಮೆ ಮಾಡಲು ಟೆಲಿಫೋನ್ ಪ್ರಿಫರೆನ್ಸ್ ಸೇವೆಯಲ್ಲಿ ನೋಂದಾಯಿಸಿಕೊಳ್ಳಿ.
  • ಮನೆಬಾಗಿಲಿಗೆ ಬರುವವರು: ಅಪರಿಚಿತರು ಅನಿರೀಕ್ಷಿತವಾಗಿ ಮನೆಬಾಗಿಲಿಗೆ ಬಂದು ಸೇವೆ ನೀಡಲು ಮುಂದಾದರೆ “ಬೇಡ, ಧನ್ಯವಾದಗಳು” ಎಂದು ಹೇಳಿ. ಸೇವೆಗಳಿಗೆ ಸಂಬಂಧಿಸಿದಂತೆ ಎಂದಿಗೂ ತಕ್ಷಣವೇ ಸಹಿ ಮಾಡಬೇಡಿ, ಯಾವಾಗಲೂ ಲಿಖಿತರೂಪದ ಹಲವು ಕೋಟ್‌ ಅಥವಾ ಉಲ್ಲೇಖಗಳ ಬಗ್ಗೆ ವಿಚಾರಿಸಿ.

3. ನಿಮ್ಮ ಖಾತೆಗಳು ಮತ್ತು ಸಾಧನಗಳನ್ನು ಸುರಕ್ಷಿತಗೊಳಿಸುವುದು

  • ಬಲವಾದ ಪಾಸ್‌ವರ್ಡ್‌ಗಳು: ಪ್ರತಿಯೊಂದು ಖಾತೆಗೂ ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳ ವಿಶಿಷ್ಟ ಸಂಯೋಜನೆಯನ್ನು ಬಳಸಿ.
  • ಬಹು-ಅಂಶ ದೃಢೀಕರಣ (MFA): ಅಗತ್ಯ ಹೆಚ್ಚುವರಿ ಭದ್ರತೆಗಳಿಗಾಗಿ ಸಾಧ್ಯವಾದಾಗಲೆಲ್ಲ MFA ಅನ್ನು ಸಕ್ರಿಯಗೊಳಿಸಿ.
  • ಸ್ವಯಂಚಾಲಿತ ಅಪ್‌ಡೇಟ್‌ಗಳು: ತಿಳಿದಿರುವ ಭದ್ರತಾ ದೋಷಗಳನ್ನು ಸರಿಪಡಿಸಲು ಆಪರೇಟಿಂಗ್ ಸಿಸ್ಟಮ್‌ಗಳು ಮತ್ತು ಆ್ಯಪ್‌ಗಳನ್ನು ಅಪ್‌ಡೇಟ್‌ ಮಾಡುತ್ತಿರಿ.
  • ನಿಯಮಿತ ಬ್ಯಾಕಪ್‌ಗಳು: ಮಾಸಿಕ ಆಧಾರದ ಮೇಲೆ ಪ್ರಮುಖ ಫೈಲ್‌ಗಳನ್ನು ಬಾಹ್ಯ ಡ್ರೈವ್ ಅಥವಾ ವಿಶ್ವಾಸಾರ್ಹ ಕ್ಲೌಡ್ ಸೇವೆಗೆ ಬ್ಯಾಕಪ್ ಮಾಡಿ.
  • ಆ್ಯಂಟಿವೈರಸ್/ಮಾಲ್‌ವೇರ್‌ ರಕ್ಷಣೆ: ಆಗಾಗ್ಗೆ ಮಾಲ್‌ವೇರ್‌/ಆ್ಯಂಟಿವೈರಸ್‌ಗಳ ಪರಿಶೀಲನೆಯನ್ನು ಪರಿಣಾಮಕಾರಿಯಾಗಿ ಮಾಡುತ್ತಿರಿ.

ನಿಮ್ಮ ಮಾಹಿತಿಯು ಸೋರಿಕೆಯಾಗಿದೆ ಎಂದು ನಿಮಗೆ ಅನುಮಾನ ಉಂಟಾದರೆ, ತಕ್ಷಣವೇ ವಂಚನೆಯನ್ನು ವರದಿ ಮಾಡಿ.

4. ಮುಂದಿನ ಪೀಳಿಗೆಯನ್ನು ಸಬಲವಾಗಿಸುವುದು

ಮಕ್ಕಳಿಗೆ ಆನ್‌ಲೈನ್ ಸುರಕ್ಷತೆಯ ಬಗ್ಗೆ ಕಲಿಸುವುದು ಅತ್ಯಗತ್ಯ. ಇವುಗಳ ಬಗ್ಗೆ ಮಾತನಾಡುವುದನ್ನು ದಿನಚರಿಯನ್ನಾಗಿ ರೂಢಿಸಿಕೊಳ್ಳಿ:

  • ಗೌಪ್ಯತೆ: ಅವರು ವೈಯಕ್ತಿಕ ಮಾಹಿತಿಯನ್ನು ಏಕೆ ಹಂಚಿಕೊಳ್ಳಬಾರದು ಅಥವಾ ಚಾಟ್‌ಗಳಲ್ಲಿ ಅಪರಿಚಿತರೊಂದಿಗೆ ಏಕೆ ಮಾತನಾಡಬಾರದು ಎಂಬುದರ ಬಗ್ಗೆ ತಿಳಿಸಬೇಕು.
  • ಪೋಷಕರ ನಿಯಂತ್ರಣಗಳು: ಸೂಕ್ತವಲ್ಲದ ಸೈಟ್‌ಗಳನ್ನು ಬ್ಲಾಕ್‌ ಮಾಡಲು ಮತ್ತು ಉತ್ತಮ ಸ್ಕ್ರೀನ್‌ಟೈಮ್‌ ಮಿತಿಗಳನ್ನು ಸೆಟ್‌ ಮಾಡಲು ಪರಿಕರಗಳನ್ನು ಬಳಸಿ.
  • ಮುಕ್ತ ಸಂವಹನ: ಆನ್‌ಲೈನ್‌ನಲ್ಲಿ ಯಾವುದಾದರೂ ವಿಷಯ “ಆತಂಕ” ಸೃಷ್ಟಿಸಿದರೆ ತಕ್ಷಣ ನಿಮ್ಮ ಬಳಿಗೆ ಬರುವಂತೆ ಅವರನ್ನು ಪ್ರೋತ್ಸಾಹಿಸಿ.
  • ನಿಯಂತ್ರಣವಲ್ಲ, ಸಬಲಗೊಳಿಸಿ: ಆ್ಯಕ್ಸೆಸ್‌ ಅನ್ನು ನಿರ್ಬಂಧಿಸುವ ಬದಲು ಮಗುವಿಗೆ ಡಿಜಿಟಲ್ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿ.
  • ಕುಟುಂಬದ ಕೋಡ್ ವರ್ಡ್: AI ಸ್ಕ್ಯಾಮರ್‌ಗಳು ಎದುರಾದ ಸಂದರ್ಭದಲ್ಲಿ, AI ಬಳಸುವ ವಂಚಕರಿಂದ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ವಂಚನೆಗೊಳಗಾಗುವುದನ್ನು ತಪ್ಪಿಸಲು ಕುಟುಂಬದಲ್ಲಿ ಸಾಮಾನ್ಯ ಕೋಡ್ ವರ್ಡ್ ಬಳಸುವುದು ಮುಖ್ಯವಾಗಿರುತ್ತದೆ.

ದೂರು ನೀಡುವುದು ಹೇಗೆ?

ನೀವು ವಂಚಿತರಾಗಿದ್ದೀರಿ ಎಂದು ಅನುಮಾನ ಬಂದರೆ, ತಕ್ಷಣ ವರದಿ ಮಾಡಿ:

PhonePe ನಲ್ಲಿ ವರದಿ ಮಾಡುವುದು:

  • PhonePe ಆ್ಯಪ್: ‘Help/ಸಹಾಯ’ ವಿಭಾಗಕ್ಕೆ ಹೋಗಿ ದೂರು ನೀಡಿ.
  • ಗ್ರಾಹಕ ಬೆಂಬಲ: 80-68727374 / 022-68727374 ಸಂಖ್ಯೆಗೆ ಕರೆ ಮಾಡಿ.
  • ಸಾಮಾಜಿಕ ಜಾಲತಾಣಗಳು:
  • ದೂರು ಪರಿಹಾರ: PhonePe ಕುಂದುಕೊರತೆ ಪೋರ್ಟಲ್ನಲ್ಲಿ ದೂರು ದಾಖಲಿಸಿ.

ಸರ್ಕಾರಿ ಅಧಿಕಾರಿಗಳಿಗೆ ವರದಿ ಮಾಡುವುದು:

  • ಸೈಬರ್ ಕ್ರೈಮ್: ಸೈಬರ್ ಕ್ರೈಂ ಪೋರ್ಟಲ್ನಲ್ಲಿ ಆನ್‌ಲೈನ್ ದೂರು ನೀಡಿ ಅಥವಾ 1930 ಕ್ಕೆ ಕರೆ ಮಾಡಿ.
  • ದೂರಸಂಪರ್ಕ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp / ಟೆಲಿಗ್ರಾಮ್ ವಂಚನೆಯನ್ನು ವರದಿ ಮಾಡಿ.

ಸುರಕ್ಷತೆಯ ಸಂಸ್ಕೃತಿಯನ್ನು ನಿರ್ಮಿಸುವುದು

ಡಿಜಿಟಲ್ ಸುರಕ್ಷತೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜಾಗರೂಕರಾಗಿರುವುದು, MFA ನಂತಹ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ಎಚ್ಚರಿಕೆಯ ಮನಸ್ಥಿತಿಯನ್ನು ಹೊಂದುವುದರ ಮೂಲಕ ನೀವು ನಿಮ್ಮ ಆಂತರಿಕ ವಲಯವನ್ನು ರಕ್ಷಿಸಬಹುದು. ಎಲ್ಲರಿಗೂ ಸುರಕ್ಷಿತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನೆರವಾಗಬಹುದು.

ಮುಖ್ಯವಾದ ವಿಷಯ — PhonePe ಎಂದಿಗೂ ನಿಮ್ಮ ಖಾಸಗಿ ಅಥವಾ ಗೌಪ್ಯ ವಿವರಗಳನ್ನು (PIN, OTP) ಕೇಳುವುದಿಲ್ಲ. phonepe.com ಡೊಮೇನ್‌ನಿಂದಲ್ಲದಿದ್ದರೆ PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಯಾವುದೇ ಇ-ಮೇಲ್ ಬಂದರೆ ಅದನ್ನು ನಂಬಬೇಡಿ. ನಿಮಗೆ ಅನುಮಾನ ಬಂದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ.

Keep Reading