
Trust & Safety
ಡೀಪ್‌ಫೇಕ್ ಜಾಲ : AI ತಂತ್ರಜ್ಞಾನದ ಕರಾಳ ಮುಖದಿಂದ ಸುರಕ್ಷಿತವಾಗಿರಿ
PhonePe Regional|3 min read|14 October, 2025
ಈ ವರ್ಷ ಎಲ್ಲೆಲ್ಲೂ ಕೇಳಿಬರುತ್ತಿರುವ ಒಂದೇ ಪದ ಅಂದ್ರೆ ಅದು AI. ಅದು ಸರಿ ಕೂಡ. ಟೆಕ್ನಾಲಜಿಯಿಂದ ಹಿಡಿದು ಸಿನಿಮಾ ತನಕ, ನಮ್ಮ ದಿನನಿತ್ಯದ ಕೆಲಸಗಳಲ್ಲಿ ಮತ್ತು ಹೊಸ ಹೊಸ ಆವಿಷ್ಕಾರಗಳಲ್ಲಿ AI ಬಳಕೆ ಹೆಚ್ಚುತ್ತಲೇ ಇದೆ. ಆದರೆ, ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಎಷ್ಟು ಸುಲಭವಾಗಿ ಕೈಗೆಟುಕುತ್ತದೆಯೋ, ಅದರಿಂದಾಗುವ ಅಪಾಯಗಳೂ ಅಷ್ಟೇ ಹೆಚ್ಚಾಗುತ್ತಿವೆ. ಇವತ್ತು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ದೊಡ್ಡ ನಟರ, ರಾಜಕಾರಣಿಗಳ ಫೋಟೋ ಮತ್ತು ವಿಡಿಯೋಗಳನ್ನ AI ಬಳಸಿ, ನೈಜವೆನಿಸುವ ರೀತಿಯಲ್ಲಿ ಸೃಷ್ಟಿ ಮಾಡಲಾಗುತ್ತಿದೆ. ಯಾವುದು ಸತ್ಯ, ಯಾವುದು ಸುಳ್ಳು ಅಂತ ಹೇಳುವುದೇ ಕಷ್ಟ! ಇದೇ ತಂತ್ರಜ್ಞಾನವನ್ನ ಈಗ ಮೋಸಗಾರರು ದುರುಪಯೋಗಪಡಿಸಿಕೊಂಡು, ಡೀಪ್‌ಫೇಕ್ ಬಳಸಿ ಬೇರೆಯವರ ಸೋಗು ಹಾಕಿ ಜನರಿಗೆ ಪಂಗನಾಮ ಹಾಕುತ್ತಿದ್ದಾರೆ.
ಡೀಪ್‌ಫೇಕ್ ಸೋಗು ಹಾಕುವಿಕೆ ಎಂದರೇನು?
ಡೀಪ್‌ಫೇಕ್ ಸೋಗು ಹಾಕುವಿಕೆ ಎಂದರೆ ವಂಚಕನು AI ತಂತ್ರಜ್ಞಾನವನ್ನು ಬಳಸಿಕೊಂಡು ಯಾರೋ ಒಬ್ಬ ವ್ಯಕ್ತಿಯಂತೆ ನಟಿಸಿ, ನಿಮ್ಮನ್ನು ಮೋಸಗೊಳಿಸುವ ಗುರಿಯೊಂದಿಗೆ ಅವರಿಗೆ ಹಣ ನೀಡುವಂತೆ ಅಥವಾ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮಾಡುವುದು. ಅವರು ಸ್ನೇಹಿತ, ಕುಟುಂಬ ಸದಸ್ಯ ಅಥವಾ ಕಂಪನಿ ಅಥವಾ ಸರ್ಕಾರಿ ಅಧಿಕಾರಿಯಂತೆ ನಟಿಸುವ ಮೂಲಕ ಹಾಗೆ ಮಾಡಬಹುದು.
“ಡೀಪ್ ಲರ್ನಿಂಗ್” ಮತ್ತು “ಫೇಕ್” (ಸುಳ್ಳು) ಅನ್ನೋ ಪದಗಳನ್ನ ಸೇರಿಸಿ “ಡೀಪ್‌ಫೇಕ್” ಪದ ಹುಟ್ಟಿದೆ. ಇದನ್ನು ಜನರೇಟಿವ್ ಅಡ್ವರ್ಸರಿಯಲ್ ನೆಟ್‌ವರ್ಕ್‌ಗಳು (GAN ಗಳು) ಬಳಸಿ ರಚಿಸಲಾಗಿದೆ, ಇದು ವ್ಯಕ್ತಿಯ ಡೇಟಾದಿಂದ ನಕಲಿ ಆದರೆ ಹೆಚ್ಚು ನೈಜವೆನಿಸುವ ದೃಶ್ಯಗಳನ್ನು ರಚಿಸಲು ಕಲಿಯುವ AI ತಂತ್ರಜ್ಞಾನವಾಗಿದೆ. ಅಂದರೆ, ಇದು ಒಬ್ಬ ವ್ಯಕ್ತಿಯ ಫೋಟೋ, ವಿಡಿಯೋ ಮತ್ತು ಧ್ವನಿಯಿಂದ ಕಲಿತು ನಂತರ ನೋಡೋಲು ಮತ್ತು ಕೇಳಲು ಅಸಲಿಯೆನಿಸುವ ನಕಲಿ ವಿಡಿಯೋಗಳನ್ನು ಸೃಷ್ಟಿಸುತ್ತದೆ. ಇದರಿಂದ, ವಂಚಕರ ಸುಳ್ಳು ಆಡಿಯೋ ಮೆಸೇಜ್ ಅಥವಾ ವಿಡಿಯೋಗಳನ್ನು ನಿಜ ಎಂದು ನಂಬಿ ಮೋಸ ಹೋಗುವುದು ತುಂಬಾ ಸುಲಭ.
ಸೋಗು ಹಾಕಲು ಡೀಪ್‌ಫೇಕ್ ಹೇಗೆ ಬಳಕೆಯಾಗುತ್ತದೆ?
ಡೀಪ್‌ಫೇಕ್ ತಂತ್ರಜ್ಞಾನವು ಒಬ್ಬ ವ್ಯಕ್ತಿಯ ಮುಖದ ಲಕ್ಷಣಗಳನ್ನ ಮತ್ತು ಧ್ವನಿಯನ್ನ ನಕಲು ಮಾಡಿ, ಆ ವ್ಯಕ್ತಿಯ ಒಂದು ಕೃತಕ ಪ್ರತಿಯನ್ನೇ ಸೃಷ್ಟಿಸುತ್ತೆ. ಇದನ್ನು ಕ್ರಿಮಿನಲ್‌ಗಳು ಕೆಟ್ಟ ಕೆಲಸಗಳಿಗೆ ಬಳಸುತ್ತಾರೆ. ಡೀಪ್‌ಫೇಕ್‌ಗಳನ್ನು ಸೋಗು ಹಾಕಲು ಬಳಸುವ ಕೆಲವು ವಿಧಾನಗಳು ಇಲ್ಲಿವೆ:
- ಗುರುತಿನ ಕಳ್ಳತನ: ಕೆಲವು ಆನ್‌ಲೈನ್ ಆ್ಯಪ್‌ಗಳಲ್ಲಿ ಮುಖ (face recognition) ಅಥವಾ ಧ್ವನಿ (voice recognition) ತೋರಿಸಿ ಲಾಗಿನ್ ಮಾಡಬೇಕಿರುತ್ತದೆ. ಅಪರಾಧಿಗಳು ಡೀಪ್‌ಫೇಕ್‌ಗಳನ್ನು ಬಳಸಿ ಇಂತಹ ಭದ್ರತಾ ಪ್ರೋಟೋಕಾಲ್‌ಗಳನ್ನು ಮೀರಿ, ನಿಮ್ಮ ಹೆಸರಲ್ಲಿ ಖಾತೆ ಪ್ರವೇಶಿಸಿ ಸಾಲಗಳನ್ನು ಪಡೆಯಲು ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ತೆರೆಯಲು ಅನುವು ಮಾಡಿಕೊಡುತ್ತದೆ.
- ಹಣಕಾಸಿನ ಮೋಸ: ಮೋಸಗಾರರು ನಿಮ್ಮ ಪ್ರೀತಿಪಾತ್ರರ ತರ ಡೀಪ್‌ಫೇಕ್ ವಿಡಿಯೋ ಮಾಡಿ, ಯಾವುದೋ ಸುಳ್ಳು ತುರ್ತು ಪರಿಸ್ಥಿತಿಯ ಕಾರಣ ಹೇಳಿ ಹಣ ಕೇಳಬಹುದು. ಅಥವಾ ದೊಡ್ಡ ಅಧಿಕಾರಿಯ ತರ ನಟಿಸಿ, ತಕ್ಷಣ ಹಣ ವರ್ಗಾವಣೆ ಮಾಡುವಂತೆ ಒತ್ತಾಯಿಸಬಹುದು. ಈ ನಕಲಿ ವಿಡಿಯೋಗಳು ನೋಡೋಕೆ ಮತ್ತು ಕೇಳೋಕೆ ಅಸಲಿ ಎನಿಸುವುದರಿಂದ, ಜನ ಸುಲಭವಾಗಿ ಮೋಸ ಹೋಗಬಹುದು.
- ಬೆದರಿಕೆ ಮತ್ತು ಸುಲಿಗೆ: ಕ್ರಿಮಿನಲ್‌ಗಳು ಒಬ್ಬ ವ್ಯಕ್ತಿಯ ಅಸಭ್ಯವಾದ ನಕಲಿ ವಿಡಿಯೋ ಅಥವಾ ಫೋಟೋಗಳನ್ನ ಸೃಷ್ಟಿಸಿ, ಅವುಗಳನ್ನ ಇಟ್ಟುಕೊಂಡು ಹಣಕ್ಕಾಗಿ ಬೆದರಿಸಬಹುದು ಅಥವಾ ತಮ್ಮ ಇಚ್ಛೆಗೆ ವಿರುದ್ಧವಾದ ಕೆಲಸ ಮಾಡುವಂತೆ ಒತ್ತಾಯಿಸಬಹುದು.
- ಸುಳ್ಳು ಸುದ್ದಿ ಹಬ್ಬಿಸುವುದು: ಡೀಪ್‌ಫೇಕ್ ಬಳಸಿ, ಸಾರ್ವಜನಿಕ ವ್ಯಕ್ತಿಗಳು ಅಥವಾ ಸಾಮಾನ್ಯ ಜನರು ತಾವು ಮಾಡದ ಕೆಲಸ ಅಥವಾ ಹೇಳದ ಮಾತನ್ನು ಹೇಳಿದ ಹಾಗೆ ತೋರಿಸಬಹುದು. ಇದನ್ನು ಒಬ್ಬರ ಹೆಸರು ಕೆಡಿಸಲು, ಸಮಾಜದಲ್ಲಿ ಗಲಭೆ ಎಬ್ಬಿಸಲು ಅಥವಾ ಷೇರು ಮಾರುಕಟ್ಟೆಯಲ್ಲಿ ಏರುಪೇರು ಮಾಡಲು ಬಳಸಬಹುದು.
ಡೀಪ್‌ಫೇಕ್ ಅನ್ನು ಕಂಡುಹಿಡಿಯುವುದು ಹೇಗೆ?
ಡೀಪ್‌ಫೇಕ್‌ಗಳು ಬಹುತೇಕ ಅಸಲಿ ಎನಿಸಿದರೂ, ಈ ಪ್ರಮುಖ ಚಿಹ್ನೆಗಳನ್ನು ಗಮನಿಸಿ ನೀವು ನಕಲಿಗಳನ್ನು ಪತ್ತೆ ಮಾಡಬಹುದು:
- ನೋಟದಲ್ಲಿ ವ್ಯತ್ಯಾಸಗಳು: ವಿಚಿತ್ರವಾದ ಚಲನವಲನಗಳನ್ನ ಗಮನಿಸಿ, ಉದಾಹರಣೆಗೆ, ಅಸಹಜವಾಗಿ ಕಣ್ಣು ಮಿಟುಕಿಸುವುದು ಅಥವಾ ಮುಖದ ಮೇಲೆ ಅಸಹಜ ಹಾವಭಾವಗಳು. ಅಲ್ಲದೆ, ವ್ಯಕ್ತಿಯ ಮುಖದ ಮೇಲಿನ ಬೆಳಕು ಮತ್ತು ನೆರಳು ಸುತ್ತಮುತ್ತಲಿನ ವಾತಾವರಣಕ್ಕೆ ಹೊಂದುತ್ತಿದೆಯೇ ಎಂದು ಪರಿಶೀಲಿಸಿ.
- ಧ್ವನಿಯಲ್ಲಿ ಸುಳಿವುಗಳು: ಧ್ವನಿಯನ್ನು ಗಮನವಿಟ್ಟು ಕೇಳಿ. ಅದರಲ್ಲಿ ಏರಿಳಿತವಿಲ್ಲದೆ ರೋಬೋಟ್‌ನಂತಿರಬಹುದು ಅಥವಾ ಅಸಹಜ ವಿರಾಮಗಳಿರಬಹುದು. ಧ್ವನಿಯು ವಿಡಿಯೋಗೆ ಹೊಂದಿಕೆಯಾಗದೆ ಇರಬಹುದು, ಅಂದರೆ ತುಟಿಗಳ ಚಲನೆಗೂ ಮಾತನಾಡುವ ಪದಗಳಿಗೂ ತಾಳಮೇಳ ಇಲ್ಲದಿರಬಹುದು.
- ಅನುಮಾನಾಸ್ಪದ ವಿನಂತಿಗಳು: ಯಾವುದೇ ಅನಿರೀಕ್ಷಿತ ವಿನಂತಿಗಳ ಬಗ್ಗೆ, ವಿಶೇಷವಾಗಿ ಹಣ ಅಥವಾ ಖಾಸಗಿ ಮಾಹಿತಿಯನ್ನು ಕೇಳುವ ವಿನಂತಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಮೋಸಗಾರರು ತರಾತುರಿಯಲ್ಲಿದ್ದೀವಿ ಎನ್ನುವುದಲ್ಲದೆ, ನೀವು ಬೇಗನೆ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಾರೆ.
ಡೀಪ್‌ಫೇಕ್‌ಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?
ಡೀಪ್‌ಫೇಕ್ ತಂತ್ರಜ್ಞಾನದ ಅಪಾಯ ಹೆಚ್ಚುತ್ತಿದೆ. ಆದರೆ, ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬಹುದು.
- ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ (MFA) ಬಳಸಿ: ಯಾವಾಗಲೂ ನಿಮ್ಮ ಖಾತೆಗಳಿಗೆ MFA ಆನ್ ಮಾಡಿ. ಅಂದ್ರೆ, ಪಾಸ್‌ವರ್ಡ್ ಜೊತೆಗೆ OTP ಅಥವಾ ಇನ್ನೊಂದು ರೀತಿಯ ದೃಢೀಕರಣವನ್ನು ಬಳಸುವುದು. ಇದು ನಿಮ್ಮ ಖಾತೆಗೆ ಹೆಚ್ಚಿನ ಭದ್ರತೆಯನ್ನ ನೀಡುತ್ತದೆ. ಒಂದು ವೇಳೆ ವಂಚಕ ನಿಮ್ಮ ಮುಖವನ್ನ ನಕಲು ಮಾಡಿ ಲಾಗಿನ್ ಆಗಲು ಪ್ರಯತ್ನಿಸಿದರೂ, ಈ ಎರಡನೇ ಹಂತದ ಸೆಕ್ಯುರಿಟಿ ಅವರನ್ನು ತಡೆಯುತ್ತೆ.
- ಅನುಮಾನಾಸ್ಪದ ವಿನಂತಿಗಳನ್ನು ಪರಿಶೀಲಿಸಿ: ಸ್ನೇಹಿತರೊಬ್ಬರು ಅಥವಾ ಸಹೋದ್ಯೋಗಿಯೊಬ್ಬರು ವಿಡಿಯೋ ಕಾಲ್ ಅಥವಾ ಮೆಸೇಜ್ ಮೂಲಕ ವಿಚಿತ್ರವಾಗಿ ಹಣ ಅಥವಾ ಮಾಹಿತಿ ಕೇಳಿದರೆ, ತಕ್ಷಣ ಫೋನ್ ಕಟ್ ಮಾಡಿ. ನಿಮಗೆ ಗೊತ್ತಿರುವ ಅವರದೇ ಇನ್ನೊಂದು ನಂಬರ್‌ಗೆ ಕರೆ ಮಾಡಿ ವಿಷಯ ನಿಜವೇ ಎಂದು ಖಚಿತಪಡಿಸಿಕೊಳ್ಳಿ.
- ನಿಮಗೂ ಅರಿವಿರಲಿ, ಬೇರೆಯವರಿಗೂ ತಿಳಿಸಿ: ಡೀಪ್‌ಫೇಕ್‌ನ ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸಲು ಕಲಿಯಿರಿ ಮತ್ತು ನಿಮ್ಮ ಕುಟುಂಬದವರು ಹಾಗೂ ಸಹೋದ್ಯೋಗಿಗಳಿಗೂ ಅದೇ ರೀತಿ ಮಾಡಲು ಪ್ರೋತ್ಸಾಹಿಸಿ. “ನಂಬಿ, ಆದರೆ ಖಚಿತಪಡಿಸಿಕೊಂಡ ನಂತರ” ಎಂಬ ಮನೋಭಾವವೇ ಇಂತಹ ವಂಚನೆಗಳ ವಿರುದ್ಧ ನಿಮ್ಮ ಅತ್ಯುತ್ತಮ ರಕ್ಷಣೆ.
ದೂರು ನೀಡುವುದು ಹೇಗೆ?
ನೀವು ವಂಚನೆಗೆ ಗುರಿಯಾಗಿದ್ದೀರಿ ಎಂದು ಅನುಮಾನ ಬಂದರೆ, ತಕ್ಷಣ ದೂರು ನೀಡಿ:
PhonePe ನಲ್ಲಿ ದೂರು ನೀಡುವುದು:
- PhonePe ಆ್ಯಪ್: ಆ್ಯಪ್‌ನಲ್ಲಿ ಸಹಾಯ ವಿಭಾಗಕ್ಕೆ ಹೋಗಿ ದೂರು ನೀಡಿ
- PhonePe ಗ್ರಾಹಕ ಬೆಂಬಲ: 80-68727374 / 022-68727374 ಗೆ ಕರೆ ಮಾಡಿ.
- ಸೋಶಿಯಲ್ ಮೀಡಿಯಾ ವರದಿ:
- Twitter: PhonePe Support
- Facebook: PhonePe Official
- ಕುಂದುಕೊರತೆ ನಿವಾರಣೆ: PhonePe ಕುಂದುಕೊರತೆ ಪೋರ್ಟಲ್‌ನಲ್ಲಿ ದೂರು ನೀಡಿ
ಅಧಿಕಾರಿಗಳಿಗೆ ದೂರು ನೀಡುವುದು:
- ಸೈಬರ್ ಕ್ರೈಮ್ ಸೆಲ್: ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ಆನ್ಲೈನ್ನಲ್ಲಿ ದೂರು ನೀಡಿ ಅಥವಾ 1930 ಗೆ ಕರೆ ಮಾಡಿ.
- ದೂರಸಂಪರ್ಕ ಇಲಾಖೆ (DOT): ಅನುಮಾನಾಸ್ಪದ ಮೆಸೇಜ್, ಕರೆಗಳು ಅಥವಾ ವಾಟ್ಸಪ್ ವಂಚನೆಗಳ ಬಗ್ಗೆ ಸಂಚಾರ ಸಾಥಿ ಪೋರ್ಟಲ್ನಲ್ಲಿರುವ ‘ಚಕ್ಷು’ ಸೌಲಭ್ಯದ ಮೂಲಕ ದೂರು ನೀಡಿ.
ಪ್ರಮುಖ ಸೂಚನೆ — PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಬಂದಿರದ, ಆದರೆ PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಎಲ್ಲ ಇಮೇಲ್‌ಗಳನ್ನು ನಿರ್ಲಕ್ಷಿಸಿ. ವಂಚನೆ ನಡೆದಿದೆ ಎಂದು ನಿಮಗೆ ಅನುಮಾನ ಉಂಟಾದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.