
Trust & Safety
ನಕಲಿ ಆ್ಯಪ್‌ಗಳು (APK) ಮತ್ತು ಮೋಸದ ಜಾಲಗಳಿಂದ ಸುರಕ್ಷಿತವಾಗಿರುವುದು ಹೇಗೆ?
PhonePe Regional|3 min read|17 December, 2025
ಇತ್ತೀಚಿನ ದಿನಗಳಲ್ಲಿ ಪಾವತಿಗಳು, ಬ್ಯಾಂಕಿಂಗ್, ಗುರುತಿನ ಚೀಟಿಗಳು, ಕೆಲಸದ ದಾಖಲೆಗಳು ಮತ್ತು ಖಾಸಗಿ ವಿಷಯಗಳೆಲ್ಲವೂ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ ಇರುತ್ತವೆ. ನಮ್ಮ ಒಂದೇ ಮೊಬೈಲ್‌ನಲ್ಲಿ ಇಷ್ಟೆಲ್ಲಾ ಮುಖ್ಯವಾದ ಮಾಹಿತಿಗಳು ಇರುವುದರಿಂದ, ಮೋಸಗಾರರು ನಕಲಿ ಆ್ಯಪ್‌ಗಳು ಮತ್ತು APK ಫೈಲ್‌ಗಳ ಮೂಲಕ ಜನರನ್ನು ಯಾಮಾರಿಸಲು ಪ್ರಯತ್ನಿಸುತ್ತಾರೆ.
ಈ ರೀತಿಯ ಮೋಸ ಹೋಗುವುದು ಒಂದು ಸಾಮಾನ್ಯ ವಿಷಯದಿಂದಲೂ ಇರಬಹುದು. ವಾಟ್ಸಾಪ್ ಅಥವಾ ಟೆಲಿಗ್ರಾಮ್‌ನಲ್ಲಿ ಬರುವ ಒಂದು ಲಿಂಕ್, ಟ್ರಾಫಿಕ್ ಚಲನ್ ಬಾಕಿ ಇದೆ ಎಂದು ಹೇಳುವ ಒಂದು ಮೆಸೇಜ್, ಅಥವಾ OTT ಚಂದಾದಾರಿಕೆಗೆ “ಉಚಿತ ಅಪ್‌ಗ್ರೇಡ್” ನೀಡುತ್ತೇವೆ ಎನ್ನುವ ಸಂದೇಶಗಳು ಆಗಿದ್ದರೂ ಸಾಕು. ಇವುಗಳನ್ನು ನಂಬಿ ಕೇವಲ ಒಂದು ಬಾರಿ ಕ್ಲಿಕ್ ಮಾಡಿದರೆ, ನಿಮ್ಮ ಫೋನಿನ ನಿಯಂತ್ರಣ ಬೇರೊಬ್ಬರ ಕೈಗೆ ಸಿಗುತ್ತದೆ.
APK ಡೌನ್‌ಲೋಡ್‌ಗಳು ಏಕೆ ಅಪಾಯಕಾರಿ?
APK (ಆಂಡ್ರಾಯ್ಡ್ ಪ್ಯಾಕೇಜ್ ಫೈಲ್) ಎನ್ನುವುದು ಆಂಡ್ರಾಯ್ಡ್ ಫೋನ್‌ಗಳಲ್ಲಿ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಬಳಸುವ ಒಂದು ಫೈಲ್. Google Play Store, Apple App Store ಅಥವಾ Indus App Storeನಂತಹ ಅಧಿಕೃತ ಆ್ಯಪ್‌ಸ್ಟೋರ್ ಬಿಟ್ಟು, ಹೊರಗಿನಿಂದ ಆ್ಯಪ್‌ಗಳನ್ನು ಹಾಕಿಕೊಳ್ಳಲು ಇದು ಅವಕಾಶ ನೀಡುತ್ತದೆ. ಕೆಲವೊಮ್ಮೆ ಇದು ಅಗತ್ಯವಿದ್ದರೂ, ಅಧಿಕೃತ ಸ್ಟೋರ್‌ಗಳಲ್ಲಿ ಇರುವ ಸುರಕ್ಷತಾ ಪರೀಕ್ಷೆಗಳು ಈ ಹೊರಗಿನ ಫೈಲ್‌ಗಳಿಗೆ ಇರುವುದಿಲ್ಲ. ಹಾಗಾಗಿ ಇದು ಅಪಾಯಕಾರಿ.
ಮೋಸದ ಜಾಲ ಹೇಗೆ ಕೆಲಸ ಮಾಡುತ್ತದೆ?
ಮೋಸಗಾರರು ಸಾಮಾನ್ಯವಾಗಿ ಒಂದೇ ರೀತಿಯ ಯೋಜನೆಯನ್ನು ಅನುಸರಿಸುತ್ತಾರೆ:
- ಮೊದಲಿಗೆ ಬಹುಮಾನ, ಸಾಲ ಅಥವಾ ದಂಡ ಮನ್ನಾ ಮಾಡುತ್ತೇವೆ ಎಂದು ಆಸೆ ತೋರಿಸಿ ಒಂದು ಲಿಂಕ್ ಅಥವಾ ಮೆಸೇಜ್ ಕಳುಹಿಸುತ್ತಾರೆ.
- ಆ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅಧಿಕೃತ ಆ್ಯಪ್ ಸ್ಟೋರ್‌ಗೆ ಹೋಗುವ ಬದಲು, ನೇರವಾಗಿ ಒಂದು ನಕಲಿ ಆ್ಯಪ್ (APK) ಡೌನ್‌ಲೋಡ್ ಆಗುತ್ತದೆ.
- ಆ ಆ್ಯಪ್ ನಿಮ್ಮ ಫೋನಿನ (ಮೆಸೇಜ್, ಸಂಪರ್ಕ, ನೋಟಿಫಿಕೇಶನ್ ಇತ್ಯಾದಿಗಳನ್ನು ನೋಡಲು) ಅನಗತ್ಯವಾದ ಅನುಮತಿ ಕೇಳುತ್ತದೆ.
- ಆ ನಕಲಿ ಆ್ಯಪ್ ನೋಡಲು ಏನೂ ಕೆಲಸ ಮಾಡದಂತೆ ಅಥವಾ ಕೆಟ್ಟು ಹೋದಂತೆ ಕಾಣುತ್ತದೆ, ಆದರೆ ಅದರ ಹಿಂದೆಯೇ ಒಂದು ವೈರಸ್ ಗುಟ್ಟಾಗಿ ಕೆಲಸ ಮಾಡುತ್ತಿರುತ್ತದೆ.
- ಇದರ ಮೂಲಕ ಮೋಸಗಾರರು ನಿಮ್ಮ OTP ಕದಿಯುತ್ತಾರೆ, ನಿಮ್ಮ ಸ್ಕ್ರೀನ್ ಮೇಲೆ ಕಣ್ಣಿಡುತ್ತಾರೆ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಕದಿಯುತ್ತಾರೆ.
ಹಣ ಕಳೆದುಕೊಂಡ ಮೇಲೆ ಅಥವಾ ಬ್ಯಾಂಕ್ ಖಾತೆ ಖಾಲಿಯಾದ ಮೇಲೆಯೇ ಜನರಿಗೆ ತಾವು ಮೋಸ ಹೋಗಿದ್ದೇವೆ ಎಂದು ಅರಿವಾಗುತ್ತದೆ.
ಈ ಸಮಸ್ಯೆ ಎಷ್ಟು ಗಂಭೀರವಾದುದು?
2024ರಲ್ಲಿ ಭಾರತದಲ್ಲಿ ಸುಮಾರು 36 ಲಕ್ಷ ಸೈಬರ್ ವಂಚನೆಯ ದೂರುಗಳು ದಾಖಲಾಗಿವೆ ಮತ್ತು ಇದರಿಂದ ಸುಮಾರು ₹22,845 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 2022ರಲ್ಲಿ 10.29 ಲಕ್ಷವಿದ್ದ ಸೈಬರ್ ದಾಳಿಗಳ ಸಂಖ್ಯೆ, 2024ರಲ್ಲಿ 22.68 ಲಕ್ಷಕ್ಕೆ ಏರಿಕೆಯಾಗಿದೆ.*
ಯಾರಿಗೆ ಹೆಚ್ಚು ಅಪಾಯವಿದೆ?
ಯಾರು ಬೇಕಾದರೂ ಮೋಸ ಹೋಗಬಹುದು, ಆದರೆ ಈ ಕೆಳಗಿನವರು ಸುಲಭವಾಗಿ ಬಲಿಯಾಗುತ್ತಾರೆ:
- ಹೆಚ್ಚು ಆ್ಯಪ್‌ಗಳನ್ನು ಬಳಸುವ ಮತ್ತು ಆನ್‌ಲೈನ್ ಮೂಲಕ ಪದೇ ಪದೇ ಹಣಕಾಸಿನ ವ್ಯವಹಾರ ಮಾಡುವ ಉದ್ಯೋಗಿಗಳು.
- ತಂತ್ರಜ್ಞಾನದ ಬಗ್ಗೆ ಹೆಚ್ಚು ಅರಿವಿಲ್ಲದ ಹಿರಿಯ ನಾಗರಿಕರು (ಅಧಿಕೃತವಾಗಿ ಕಾಣುವ ಯಾವುದೇ ಮೆಸೇಜ್ ಅನ್ನು ಇವರು ಬೇಗ ನಂಬುತ್ತಾರೆ).
- “ಉಚಿತ”ವಾಗಿ ಗೇಮ್ ಅಥವಾ ಆ್ಯಪ್ ಪಡೆಯಲು ಆಸೆಪಡುವ ಯುವಕರು.
ಗಮನಿಸಬೇಕಾದ ಎಚ್ಚರಿಕೆಯ ಕರೆಗಂಟೆಗಳು
- Indus App Storeನಂತಹ ಅಧಿಕೃತ ಆ್ಯಪ್‌ಸ್ಟೋರ್ ಬದಲಿಗೆ SMS ಅಥವಾ WhatsApp ಅಥವಾ ಯಾವುದೇ ಥರ್ಡ್ ಪಾರ್ಟಿ ಆ್ಯಪ್‌ಗಳ ಮೂಲಕ ಕಳುಹಿಸಲಾದ ಡೌನ್‌ಲೋಡ್ ಲಿಂಕ್.
- ಆ್ಯಪ್‌ಗೆ ಸಂಬಂಧವಿಲ್ಲದ ಅನುಮತಿಗಳನ್ನು ಕೇಳುವುದು (ಉದಾಹರಣೆಗೆ: ಒಂದು ಟಾರ್ಚ್ ಲೈಟ್ ಆ್ಯಪ್ ನಿಮ್ಮ ಕಾಂಟ್ಯಾಕ್ಟ್ ಅಥವಾ ಮೆಸೇಜ್ ಓದಲು ಅನುಮತಿ ಕೇಳುವುದು).
- ತಪ್ಪಾಗಿ ಬರೆದ ಅಥವಾ ಅನುಮಾನಾಸ್ಪದ ಆ್ಯಪ್ ಡೆವೆಲಪರ್ ಹೆಸರು.
- ನಂಬಲು ಅಸಾಧ್ಯವಾದ ಆಫರ್‌ಗಳು (“ಉಚಿತ ಪ್ರೀಮಿಯಂ”, “ತಕ್ಷಣ ಸಾಲ ಮಂಜೂರು”, ಅಥವಾ ಅಪರಿಚಿತರಿಂದ ಬರುವ ಮದುವೆ ಆಮಂತ್ರಣಗಳು).
- ಕಡಿಮೆ ಡೌನ್‌ಲೋಡ್ ಅಥವಾ ಜನರ ನಕಾರಾತ್ಮಕ ರಿವ್ಯೂ ಹೊಂದಿರುವ ಆ್ಯಪ್.
ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ?
- ಯಾವಾಗಲೂ ಅಧಿಕೃತ ಸ್ಟೋರ್‌ಗಳಿಂದಲೇ (Indus Appstore/ Google Play/ Apple App Store) ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿ.
- ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಫೋನ್ ಸೆಟ್ಟಿಂಗ್ಸ್‌ನಲ್ಲಿ “Install Unknown Apps” (ಅಪರಿಚಿತ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿ) ಎನ್ನುವ ಆಯ್ಕೆಯನ್ನು ಆಫ್ ಮಾಡಿಡಿ.
- ಅನಿರೀಕ್ಷಿತವಾಗಿ ಬರುವ ದಂಡ, ರಿಫಂಡ್, ಬಹುಮಾನ ಅಥವಾ ಸಾಲದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
- ಯಾವುದೇ ಆ್ಯಪ್‌ಗೆ “ಅನುಮತಿ” (Allow) ಕೊಡುವ ಮುನ್ನ, ಅದು ಏನನ್ನು ಕೇಳುತ್ತಿದೆ ಎಂದು ಒಮ್ಮೆ ಪರಿಶೀಲಿಸಿ.
- ನಿಮ್ಮ ಫೋನಿನಲ್ಲಿ ಉತ್ತಮವಾದ ಆಂಟಿ-ವೈರಸ್ ಅಥವಾ ಸೆಕ್ಯೂರಿಟಿ ಆ್ಯಪ್ ಬಳಸಿ.
ಒಂದು ವೇಳೆ ನೀವು ನಕಲಿ ಆ್ಯಪ್ ಹಾಕಿಕೊಂಡಿದ್ದರೆ ಏನು ಮಾಡಬೇಕು?
- ತಕ್ಷಣವೇ ಆ ಆ್ಯಪ್ ಅನ್ನು ಡಿಲೀಟ್ ಮಾಡಿ.
- ಸ್ವಲ್ಪ ಸಮಯದವರೆಗೆ ನಿಮ್ಮ ಮೊಬೈಲ್ ಡೇಟಾ ಮತ್ತು ವೈ-ಫೈ ಅನ್ನು ಆಫ್ ಮಾಡಿ.
- ನಿಮ್ಮ ಬ್ಯಾಂಕಿಂಗ್, ಇ-ಮೇಲ್ ಮತ್ತು ಪಾವತಿ ಆ್ಯಪ್‌ಗಳ ಪಾಸ್‌ವರ್ಡ್ ಬದಲಾಯಿಸಿ.
- ತಕ್ಷಣ ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ, ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಫ್ರೀಜ್ ಮಾಡಲು ಅಥವಾ ಚಟುವಟಿಕೆಗಳನ್ನು ಗಮನಿಸಲು ತಿಳಿಸಿ.
ದೂರು ನೀಡುವುದು ಹೇಗೆ?
ನೀವು ವಂಚಿತರಾಗಿದ್ದೀರಿ ಎಂದು ಅನುಮಾನ ಬಂದರೆ, ತಕ್ಷಣ ವರದಿ ಮಾಡಿ:
PhonePe ನಲ್ಲಿ ವರದಿ ಮಾಡುವುದು:
- PhonePe ಆ್ಯಪ್: ‘Help/ಸಹಾಯ’ ವಿಭಾಗಕ್ಕೆ ಹೋಗಿ ದೂರು ನೀಡಿ.
- ಗ್ರಾಹಕ ಬೆಂಬಲ: 80-68727374 / 022-68727374 ಸಂಖ್ಯೆಗೆ ಕರೆ ಮಾಡಿ.
- ಸಾಮಾಜಿಕ ಜಾಲತಾಣಗಳು:
- Twitter: PhonePe Support
- Facebook: PhonePe Official
- ದೂರು ಪರಿಹಾರ: PhonePe ಕುಂದುಕೊರತೆ ಪೋರ್ಟಲ್ನಲ್ಲಿ ದೂರು ದಾಖಲಿಸಿ.
ಸರ್ಕಾರಿ ಅಧಿಕಾರಿಗಳಿಗೆ ವರದಿ ಮಾಡುವುದು:
- ಸೈಬರ್ ಕ್ರೈಮ್: ಸೈಬರ್ ಕ್ರೈಂ ಪೋರ್ಟಲ್ನಲ್ಲಿ ಆನ್‌ಲೈನ್ ದೂರು ನೀಡಿ ಅಥವಾ 1930 ಕ್ಕೆ ಕರೆ ಮಾಡಿ.
- ದೂರಸಂಪರ್ಕ ಇಲಾಖೆ (DOT): ಅನುಮಾನಾಸ್ಪದ ಕರೆಗಳು ಅಥವಾ ಮೆಸೇಜ್‌ಗಳ ಬಗ್ಗೆ ‘ಸಂಚಾರ್ ಸಾಥಿ‘ ಪೋರ್ಟಲ್‌ನಲ್ಲಿರುವ ‘ಚಕ್ಷು’ ಆಯ್ಕೆಯ ಮೂಲಕ ವರದಿ ಮಾಡಿ.
ಕೊನೆಯ ಮಾತು
ಡಿಜಿಟಲ್ ಪಾವತಿಗಳು ಮತ್ತು ಆ್ಯಪ್‌ಗಳು ಸುರಕ್ಷಿತವಾಗಿವೆ, ಆದರೆ ನಾವು ಎಚ್ಚರಿಕೆಯಿಂದ ಇರಬೇಕು. ಹೆಚ್ಚಿನ APK/ನಕಲಿ ಅಪ್ಲಿಕೇಶನ್ ಆಧಾರಿತ ವಂಚನೆಗಳು ಆತುರದಲ್ಲಿ ಅಥವಾ ಭಯದಲ್ಲಿ ನಾವು ಸರಿಯಾಗಿ ಪರಿಶೀಲಿಸದೆ ಮುಂದುವರಿಯುವುದರಿಂದಲೇ ನಡೆಯುತ್ತವೆ. ಗಮನಾರ್ಹ ಆರ್ಥಿಕ ನಷ್ಟದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಅಪ್ಲಿಕೇಶನ್‌ನ ಮೂಲ, ಡೆವಲಪರ್‌ನ ಇಮೇಲ್, ವಿನಂತಿಸಿದ ಅನುಮತಿಗಳು ಮತ್ತು ಯಾವುದೇ ಲಿಂಕ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದೇ ಅತ್ಯಂತ ದೊಡ್ಡ ಮುಂಜಾಗ್ರತೆ.
ಎಚ್ಚರದಿಂದಿರಿ. ಅಪರಿಚಿತ ಲಿಂಕ್‌ಗಳನ್ನು ಪ್ರಶ್ನಿಸಿ. ಜವಾಬ್ದಾರಿಯಿಂದ ಡೌನ್‌ಲೋಡ್ ಮಾಡಿ.
ಮುಖ್ಯವಾದ ವಿಷಯ — PhonePe ಎಂದಿಗೂ ನಿಮ್ಮ ಖಾಸಗಿ ಅಥವಾ ಗೌಪ್ಯ ವಿವರಗಳನ್ನು (PIN, OTP) ಕೇಳುವುದಿಲ್ಲ. phonepe.com ಡೊಮೇನ್‌ನಿಂದಲ್ಲದಿದ್ದರೆ PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಯಾವುದೇ ಇ-ಮೇಲ್ ಬಂದರೆ ಅದನ್ನು ನಂಬಬೇಡಿ. ನಿಮಗೆ ಅನುಮಾನ ಬಂದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ.
*ಮೂಲ: ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್
