
Trust & Safety
ಜಂಪ್ಡ್ ಡೆಪಾಸಿಟ್ ಸ್ಕ್ಯಾಮ್: UPI ಪಿನ್ ಹಾಕುವ ಮುನ್ನ ಎಚ್ಚರ!
PhonePe Regional|3 min read|24 February, 2026
ನಿಮ್ಮ UPI ಪಿನ್ ಅನ್ನೋದು ನಿಮ್ಮ ಬ್ಯಾಂಕ್ ಖಾತೆಯ ಬೀಗದ ಕೈ ಇದ್ದಂತೆ. ಅಂದರೆ, ನಿಮ್ಮ UPI ಪಿನ್ ನಿಮ್ಮ ಹಣ ಮತ್ತು ನಿಮ್ಮ ವಹಿವಾಟುಗಳ ನಡುವಿನ ರಕ್ಷಾಕವಚ. ನೀವು ಪ್ರತಿ ಬಾರಿ ಈ ಪಿನ್ ಒತ್ತಿದಾಗಲೂ, ನಿಮ್ಮ ಖಾತೆಯಿಂದ ಹಣ ಪಡೆಯಲು ನೀವು ಅನುಮತಿ ನೀಡುತ್ತಿದ್ದೀರಿ ಎಂದೇ ಅರ್ಥ. ಹಾಗಾಗಿಯೇ ಮುಂದುವರಿಯುವ ಮುನ್ನ ಒಂದು ಕ್ಷಣ ಯೋಚಿಸುವುದು ಬಹಳ ಮುಖ್ಯ. ಆದರೆ ಗಡಿಬಿಡಿಯಲ್ಲಿ ನಾವು ಈ ವಿಷಯವನ್ನು ಮರೆತುಬಿಡುತ್ತೇವೆ. ವಂಚಕರು ಸೋಷಿಯಲ್ ಎಂಜಿನಿಯರಿಂಗ್ ಮೂಲಕ ವಂಚನೆ ಮಾಡಲು ಗ್ರಾಹಕರ ಈ ಅಜಾಗರೂಕತೆಯನ್ನು ಬಳಸಿಕೊಳ್ಳುತ್ತಾರೆ. ಜಂಪ್ಡ್ ಡೆಪಾಸಿಟ್ ವಂಚನೆಯು ಇದಕ್ಕೆ ಒಂದು ಉದಾಹರಣೆ.
ಬನ್ನಿ, ವಂಚನೆ ಹೇಗಾಗುತ್ತದೆ ಮತ್ತು ನೀವು ಹೇಗೆ ಸುರಕ್ಷಿತವಾಗಿರಬಹುದು ಎಂದು ತಿಳಿಯೋಣ.
ಏನಿದು ಜಂಪ್ಡ್ ಡೆಪಾಸಿಟ್ ಸ್ಕ್ಯಾಮ್?
ನಿಮಗೆ ಹಣ ಬರುತ್ತದೆ ಎಂದು ನಂಬಿಸಿ, ನೀವೇ UPI ಪಿನ್ ನೀಡುವಂತೆ ಮಾಡಿ, ನಿಮ್ಮ ಖಾತೆಯಿಂದ ಹಣ ಕದಿಯುವುದನ್ನೇ ‘ಜಂಪ್ಡ್ ಡೆಪಾಸಿಟ್ ಸ್ಕ್ಯಾಮ್’ ಎನ್ನಲಾಗುತ್ತದೆ. “ಜಂಪ್ಡ್” ಎಂಬ ಪದವು ವಂಚಕರು ನಿಮ್ಮನ್ನು ಮೋಸಗೊಳಿಸಿದ ನಂತರ ನಿಮ್ಮ ಖಾತೆಯಿಂದ ಹಣ ಎಷ್ಟು ಬೇಗನೆ ಹೊರಹೋಗುತ್ತದೆ ಎಂಬುದನ್ನು ಸೂಚಿಸುತ್ತದೆ. ಇಲ್ಲಿ ‘ಜಂಪ್’ ಅಂದರೆ, ಕಳ್ಳರು ನಿಮ್ಮ ಖಾತೆಯಿಂದ ಹಣ ಲೂಟಿ ಮಾಡಿದ ಮೇಲೆ, ಪೊಲೀಸರಿಗೆ ಸಿಗಬಾರದು ಎಂಬ ಕಾರಣಕ್ಕೆ ಆ ಹಣವನ್ನು ಕೆಲವೇ ಸೆಕೆಂಡುಗಳಲ್ಲಿ ಹತ್ತಾರು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ಬಿಡುತ್ತಾರೆ.
ಇತರ ವಂಚನೆಗಳಲ್ಲಿ ಕಳ್ಳರು ನಿಮ್ಮ OTP ಕೇಳಿದರೆ, ಈ ವಂಚನೆಯಲ್ಲಿ ನಿಮ್ಮ ಕೈಯಿಂದಲೇ UPI ಪಿನ್ ಹಾಕಿಸಿ ಹಣ ಲೂಟಿ ಮಾಡುತ್ತಾರೆ.
ಈ ಬಲೆ ಹೇಗೆ ಬೀಸ್ತಾರೆ ಗೊತ್ತಾ?
- ಸಣ್ಣ ಮೊತ್ತದ ಹಣ ಬರುವುದು: ಮೊದಲು ನಿಮ್ಮ ಖಾತೆಗೆ ಕೇವಲ ₹10 ಅಥವಾ ₹50 ಜಮಾ ಆದಂತೆ ಒಂದು ಮೆಸೇಜ್ ಬರುತ್ತದೆ.
- ಗಾಬರಿಯಿಂದ ಫೋನ್ ಮಾಡುವುದು: ಸ್ವಲ್ಪ ಸಮಯದ ನಂತರ ನಿಮಗೆ ಒಬ್ಬ ಅಪರಿಚಿತ ವ್ಯಕ್ತಿ ಫೋನ್ ಮಾಡ್ತಾನೆ. ಅಳುತ್ತಾ ಅಥವಾ ತುಂಬಾ ಗಾಬರಿಯಿಂದ “ಸರ್/ಮೇಡಂ, ನಾನು ಆಸ್ಪತ್ರೆ ಖರ್ಚಿಗೆ ಅಥವಾ ಬಿಲ್ ಕಟ್ಟೋಕೆ ಅಂತ ಇಟ್ಟಿದ್ದ ಹಣವನ್ನು ತಪ್ಪಾಗಿ ನಿಮ್ಮ ನಂಬರ್‌ಗೆ ಕಳಿಸಿಬಿಟ್ಟೆ, ದಯವಿಟ್ಟು ವಾಪಸ್ ಮಾಡಿ” ಅಂತ ಕೇಳಿಕೊಳ್ಳುತ್ತಾರೆ.
- ನಿಮ್ಮ ಗಮನ ಬೇರೆಡೆ ಸೆಳೆಯುವುದು: ನೀವು ಫೋನ್‌ನಲ್ಲಿ ಮಾತಾಡುವಾಗಲೇ, “ನಿಮ್ಮ ಆ್ಯಪ್ ಅಥವಾ ಮೆಸೇಜ್ ನೋಡಿ ಹಣ ಬಂದಿದೆಯಾ ಅಂತ ಚೆಕ್ ಮಾಡಿ” ಅಂತಾರೆ. ಆ ಮೆಸೇಜ್‌ಗಳಲ್ಲಿ “ಬ್ಯಾಂಕ್‌ನಿಂದ ರಿಫಂಡ್”, “ಕ್ಯಾಶ್‌ಬ್ಯಾಕ್” ಅಥವಾ “ಕಂಪನಿ ಸಂಬಳ” ಅಂತ ಬರೆದಿರೋ ಹಾಗೆ ಅವರು ನಾಟಕ ಮಾಡುತ್ತಾರೆ.
- ದೃಢೀಕರಣ: ಆಮೇಲೆ ಅವರು ನಿಮಗೆ ಒಂದು QR ಕೋಡ್ ಅಥವಾ ಲಿಂಕ್ ಕಳಿಸಿ, “ಇದನ್ನು ಸ್ಕ್ಯಾನ್ ಮಾಡಿ ನನಗೆ ಆ ₹50 ವಾಪಸ್ ಕಳಿಸಿ” ಎನ್ನುತ್ತಾರೆ. ಆದರೆ ಆ QR ಕೋಡ್‌ನಲ್ಲಿ ₹5,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವೋ ಇರುತ್ತದೆ. ನೀವು ಅವರಿಗೆ ಸಹಾಯ ಮಾಡೋ ಆತುರದಲ್ಲಿ ಪಿನ್ ಒತ್ತಿದ ಕೂಡಲೇ, ನಿಮ್ಮ ಖಾತೆಯಿಂದ ದೊಡ್ಡ ಮೊತ್ತದ ಹಣ ಕಟ್ ಆಗಿಬಿಡುತ್ತದೆ.
ಜನರು ಯಾಕೆ ಈ ಬಲೆಗೆ ಬೀಳುತ್ತಾರೆ?
ತಜ್ಞರ ಪ್ರಕಾರ, ಕಳ್ಳರು ಜನರ ಮನಸ್ಥಿತಿಯನ್ನೇ ಬಂಡವಾಳ ಮಾಡಿಕೊಳ್ತಾರೆ:
- ನಂಬಿಕೆ ಹುಟ್ಟಿಸುವುದು: ಮೊದಲು ಸಣ್ಣ ಮೊತ್ತದ ಹಣವನ್ನು ನಿಮ್ಮ ಖಾತೆಗೆ ಹಾಕುವ ಮೂಲಕ ಅವರು ನಿಮ್ಮ ನಂಬಿಕೆ ಗಳಿಸುತ್ತಾರೆ.
- ಪ್ರಾಮಾಣಿಕತೆ: ತಪ್ಪಾಗಿ ಬಂದ ಹಣವನ್ನು ವಾಪಸ್ ಮಾಡಬೇಕು ಅನ್ನೋ ನಿಮ್ಮ ಒಳ್ಳೆತನವನ್ನೇ ಅವರು ಬಳಸಿಕೊಳ್ತಾರೆ.
- ತುರ್ತು ಪರಿಸ್ಥಿತಿ: ಭಾವನಾತ್ಮಕ ತಂತ್ರಗಳನ್ನು ಬಳಸಿ, ಉದಾಹರಣೆಗೆ “ಆಸ್ಪತ್ರೆಗೆ ಹಣ ಬೇಕು” ಎಂಬಂತಹ ಸುಳ್ಳು ಕಥೆ ಹೇಳಿ, ನೀವು ಯೋಚನೆ ಮಾಡಲೂ ಸಮಯ ಕೊಡದ ಹಾಗೆ ಆತುರ ಪಡಿಸುತ್ತಾರೆ.
- ತಿಳುವಳಿಕೆಯ ಕೊರತೆ: ಹಣ ಸ್ವೀಕರಿಸಲೂ UPI ಪಿನ್ ಒತ್ತಬೇಕು ಎಂದು ಎಷ್ಟೋ ಜನ ತಪ್ಪು ತಿಳಿದುಕೊಂಡಿದ್ದಾರೆ.
ನಿಮ್ಮ ಹಣವನ್ನು ಕಾಪಾಡಿಕೊಳ್ಳುವುದು ಹೇಗೆ?
- ಸ್ವಲ್ಪ ತಡೆಯಿರಿ: ಯಾರೋ ಅಪರಿಚಿತರು ಹಣ ಬಂತು ಅಂದ ತಕ್ಷಣ ಆತುರ ಪಡಬೇಡಿ. ಇಂಥ ಮೋಸದ ಲಿಂಕ್‌ಗಳು 5-10 ನಿಮಿಷದಲ್ಲಿ ಕೆಲಸ ಮಾಡೋದು ನಿಲ್ಲಿಸುತ್ತವೆ. ನೀವು ಒಂದು 15 ನಿಮಿಷ ಸುಮ್ಮನಿದ್ದರೆ ಆ ಅಪಾಯ ದೂರವಾಗಬಹುದು.
- ವಿವರಗಳನ್ನು ಪೂರ್ತಿ ಓದಿ: ಪಿನ್ ಹಾಕುವ ಮುನ್ನ ಸ್ಕ್ರೀನ್ ಮೇಲೆ ಎಷ್ಟು ಹಣ ಕಟ್ ಆಗುತ್ತಿದೆ ಮತ್ತು ಯಾರಿಗೆ ಹೋಗುತ್ತದೆ ಎಂದು ಗಮನಿಸಿ. ನೆನಪಿಡಿ, ನೀವು ಹಣ ಸ್ವೀಕರಿಸಲು ನೀವು ಪಿನ್ ಹಾಕುವ ಅಗತ್ಯವೇ ಇಲ್ಲ.
- ಬ್ಯಾಂಕ್‌ಗೆ ಹೋಗಲು ಹೇಳಿ: ಯಾರಾದರೂ ಹಣ ತಪ್ಪಾಗಿ ಬಂದಿದೆ ಅಂದ್ರೆ, ಅವರಿಗೆ ಅವರ ಬ್ಯಾಂಕ್‌ಗೆ ಹೋಗಿ ದೂರು ಕೊಡಲು ಹೇಳಿ. ಬ್ಯಾಂಕ್‌ನವರೇ ಆ ಹಣವನ್ನು ವಾಪಸ್ ಮಾಡ್ತಾರೆ. ನೀವಾಗಿ ಯಾರೋ ಕಳಿಸಿದ QR ಕೋಡ್ ಸ್ಕ್ಯಾನ್ ಮಾಡಬೇಡಿ.
- ಸ್ಕ್ರೀನ್ ಮೇಲೆ ಏನಿದೆ ನೋಡಿ: ಪಿನ್ ಹಾಕುವ ಸ್ಕ್ರೀನ್ ಮೇಲೆ “Paying/ಹಣ ಪಾವತಿಸಲಾಗುತ್ತಿದೆ” ಅಥವಾ “Sending to/ಹಣ ಕಳಿಸಲಾಗುತ್ತಿದೆ” ಎಂದು ಕಂಡರೆ ತಕ್ಷಣ ನಿಲ್ಲಿಸಿ.
- ಸರಿಯಾದ ಆ್ಯಪ್ ಬಳಸಿ: ಫೋನ್‌ಪೇನಂತಹ ಸುರಕ್ಷಿತವಾದ ಮತ್ತು ಬ್ಯಾಂಕ್ ಆ್ಯಪ್ ಮಾತ್ರ ಬಳಸಿ.
- ಮೆಸೇಜ್ ಗಮನಿಸಿ: ಬ್ಯಾಂಕ್ ವ್ಯವಹಾರದ ಪ್ರತಿಯೊಂದು ಮೆಸೇಜ್ ಅನ್ನೂ ಸರಿಯಾಗಿ ಗಮನಿಸುತ್ತಿರಿ.
ನೀವು ನೆನಪಿಡಬೇಕಾದ ಮುಖ್ಯ ನಿಯಮ
ಯಾವುದೇ ಕಾರಣಕ್ಕೂ, ಯಾರಿಂದಲಾದರೂ ಹಣ ಪಡೆಯಲು ನೀವು UPI ಪಿನ್ ಹಾಕುವ ಅಗತ್ಯವಿಲ್ಲ. ಅದು ರಿಫಂಡ್ ಇರಲಿ, ಕ್ಯಾಶ್‌ಬ್ಯಾಕ್ ಇರಲಿ ಅಥವಾ ರಿವಾರ್ಡ್ ಆಗಿರಲಿ —ನಿಮ್ಮ ಪಿನ್ ಕೇಳುತ್ತಿದೆ ಅಂದರೆ ನಿಮ್ಮ ಖಾತೆಯಿಂದ ಹಣ ಹೋಗುತ್ತಿದೆ ಎಂದೇ ಅರ್ಥ!
ಒಂದು ವೇಳೆ ಮೋಸ ಹೋದರೆ ಏನು ಮಾಡಬೇಕು?
ನಿಮಗೆ ಮೋಸವಾಗಿದೆ ಅಂತ ಅನಿಸಿದ ತಕ್ಷಣ ತಡ ಮಾಡಬೇಡಿ. ಪ್ರತಿ ಸೆಕೆಂಡು ಕೂಡ ಮುಖ್ಯ.
ಫೋನ್‌ಪೇನಲ್ಲಿ ದೂರು ನೀಡಲು:
- ಫೋನ್‌ಪೇ ಆ್ಯಪ್‌ನಲ್ಲಿ ‘Help/ಸಹಾಯ’ ವಿಭಾಗಕ್ಕೆ ಹೋಗಿ ದೂರು ನೀಡಿ.
- ಗ್ರಾಹಕ ಬೆಂಬಲ ಸಂಖ್ಯೆ: 80-68727374 ಅಥವಾ 022-68727374 ಗೆ ಫೋನ್ ಮಾಡಿ.
- ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿ:
- Twitter: PhonePe Support
- Facebook: PhonePe Official
- ಕುಂದುಕೊರತೆ ಪರಿಹಾರ: PhonePe ಕುಂದುಕೊರತೆ ಪೋರ್ಟಲ್‌ನಲ್ಲಿ ದೂರು ಸಲ್ಲಿಸಿ
ಅಧಿಕಾರಿಗಳಿಗೆ ದೂರು ನೀಡಲು:
- ಸೈಬರ್ ಕ್ರೈಂ ಸೆಲ್: ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ನೀಡಿ ಅಥವಾ ತಕ್ಷಣವೇ 1930 ನಂಬರ್‌ಗೆ ಕರೆ ಮಾಡಿ.
- ದೂರಸಂಪರ್ಕ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp / ಟೆಲಿಗ್ರಾಮ್ ವಂಚನೆಯನ್ನು ವರದಿ ಮಾಡಿ.
ಪ್ರಮುಖ ಸೂಚನೆ — ಫೋನ್‌ಪೇ ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಅಲ್ಲದಿದ್ದರೆ, ಫೋನ್‌ಪೇನಿಂದ ಬಂದಿರುವುದಾಗಿ ಹೇಳಿಕೊಳ್ಳುವ ಎಲ್ಲಾ ಮೇಲ್‌ಗಳನ್ನು ನಿರ್ಲಕ್ಷಿಸಿ. ವಂಚನೆಯ ಅನುಮಾನವಿದ್ದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.
