
Trust & Safety
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಜಾಗರೂಕರಾಗಿರಿ: ನಕಲಿ ವೆಬ್‌ಸೈಟ್‌ಗಳು ಮತ್ತು ಮೋಸದ ಜಾಹೀರಾತುಗಳನ್ನು ಗುರುತಿಸುವುದು ಮತ್ತು ತಪ್ಪಿಸುವುದು
PhonePe Regional|3 min read|18 September, 2025
ಆನ್‌ಲೈನ್ ಶಾಪಿಂಗ್‌ನಿಂದ ವಿಭಿನ್ನ ಜನರು ವಿಭಿನ್ನ ಪ್ರಯೋಜನಗಳನ್ನು ಪಡೆಯುತ್ತಾರೆ. ಇದು ಕೆಲವರಿಗೆ ಥೆರಪಿಯಂತೆ ಕಾರ್ಯನಿರ್ವಹಿಸಿದರೆ, ಸದಾ ಕಾರ್ಯನಿರತರಾಗಿರುವ ಎಕ್ಸಿಕ್ಯುಟಿವ್‌ಗಳಿಗೆ ಅಂಗಡಿಗೆ ಹೋಗಿ ಖರೀದಿಸಲು ಸಮಯವಿಲ್ಲದಿದ್ದಾಗ ಶಾಪಿಂಗ್ ಮಾಡಲು ಇದೊಂದು ಪರ್ಯಾಯ ವಿಧಾನವಾಗಿದೆ. ಒಬ್ಬ ತಾಯಿಯು ತನ್ನ ಮಗುವಿಗಾಗಿ ಶಾಲಾ ಅಗತ್ಯಗಳಾದ ಕಾಸ್ಟ್ಯೂಮ್ ಅಥವಾ ಇತರ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವುದಲ್ಲದೇ, ಕೊನೇ ಘಳಿಗೆಯಲ್ಲಿ ಸ್ನೇಹಿತರಿಗಾಗಿ ಉಡುಗೊರೆಯನ್ನು ಖರೀದಿಸುವುದು ಸೇರಿದಂತೆ ಹತ್ತು ಹಲವು ಅವಶ್ಯಕತೆಗಳಿಗೆ ಇದೊಂದು ವೇದಿಕೆಯಾಗಿದೆ. ಆನ್‌ಲೈನ್ ಶಾಪಿಂಗ್ ಎಂಬುದು ನಾವು ನಮಗಾಗಿ ಮತ್ತು ನಮ್ಮ ಪ್ರೀತಿಪಾತ್ರರಿಗಾಗಿ ಉತ್ಪನ್ನಗಳನ್ನು ಖರೀದಿಸುವ ವಿಧಾನವನ್ನು ಖಂಡಿತವಾಗಿಯೂ ಪರಿವರ್ತಿಸಿದೆ. ದುರದೃಷ್ಟವಶಾತ್, ಈ ಅನುಕೂಲತೆಯು ಇನ್ನೊಂದು ಕರಾಳ ಮುಖವನ್ನೂ ಹೊಂದಿದೆ – ಅದೇ ಆನ್‌ಲೈನ್ ಶಾಪಿಂಗ್ ವಂಚನೆ.
ಸೈಬರ್ ಅಪರಾಧಿಗಳು ನಕಲಿ ಆನ್‌ಲೈನ್ ಸ್ಟೋರ್‌ಗಳನ್ನು ರಚಿಸುತ್ತಾರೆ ಮತ್ತು ಸೋಶಿಯಲ್ ಮೀಡಿಯಾ ಜಾಹೀರಾತುಗಳನ್ನು ಬಳಸಿಕೊಂಡು ಬಳಕೆದಾರರನ್ನು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ಅಥವಾ ಅಸ್ತಿತ್ವದಲ್ಲಿಲ್ಲದ ಉತ್ಪನ್ನಗಳಿಗೆ ಪಾವತಿಗಳನ್ನು ಮಾಡುವಂತೆ ತಿಳಿಸಿ ಮೋಸಗೊಳಿಸುತ್ತಾರೆ. ಈ ರೀತಿಯ ವಂಚನೆಗಳು ಎಷ್ಟು ನೈಜವಾಗಿ ಕಾಣುತ್ತವೆ ಎಂದರೆ, ಮೊದಲ ನೋಟದಲ್ಲಿ ಅವುಗಳಲ್ಲಿ ಯಾವುದೇ ತಪ್ಪಿರಬಹುದೆಂದು ಗೊತ್ತಾಗುವುದಿಲ್ಲ.
ಆನ್‌ಲೈನ್ ಶಾಪಿಂಗ್ ವಂಚನೆಯಿಂದ ನೂರು ಅಥವಾ ಸಾವಿರ ರೂಪಾಯಿಗಳಷ್ಟು ಮೊತ್ತವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೇ, ಇತರ ಗಂಭೀರ ಪರಿಣಾಮಗಳನ್ನೂ ಎದುರಿಸಬೇಕಾಗಬಹುದು.
- ಆರ್ಥಿಕ ನಷ್ಟ: ಒಮ್ಮೆ ಹಣ ವರ್ಗಾವಣೆಯಾದ ನಂತರ, ಅದನ್ನು ಮರುಪಡೆಯುವುದು ಬಹುತೇಕ ಅಸಾಧ್ಯ.
- ಡೇಟಾ ಕಳ್ಳತನ: ಸ್ಕ್ಯಾಮ್ ವೆಬ್‌ಸೈಟ್‌ಗಳು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಸೇರಿದಂತೆ ನಿಮ್ಮ ವೈಯಕ್ತಿಕ ವಿವರಗಳನ್ನು ದುರುಪಯೋಗಪಡಿಸಿಕೊಳ್ಳಬಹುದು.
- ಬ್ರ್ಯಾಂಡ್ ಇಮೇಜ್ ಹಾನಿ: ಇಂತಹ ವಂಚನೆಗಳಿಗೆ ಬಲಿಯಾದ ಜನರು, ಅದು ಅಧಿಕೃತ ವಹಿವಾಟಾಗಿದ್ದರೂ, ಮತ್ತೆ ಅದೇ ಬ್ರ್ಯಾಂಡ್ ಅಥವಾ ಪಾವತಿ ಗೇಟ್‌ವೇ ಅನ್ನು ಬಳಸಲು ಹಿಂಜರಿಯುತ್ತಾರೆ.
ಜನರ ನಂಬಿಕೆ, ಆತುರ ಮತ್ತು ಉತ್ತಮ ಡೀಲ್ ಪಡೆಯುವ ಬಯಕೆಯನ್ನು ವಂಚಕರು ದುರುಪಯೋಗಪಡಿಸಿಕೊಳ್ಳುತ್ತಾರೆ. ಈ ಹಗರಣಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ನೀವು ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಯೋಣ.
ಆನ್‌ಲೈನ್ ಶಾಪಿಂಗ್ ವಂಚನೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ
1. ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳು
ವಂಚಕರು ಸೋಶಿಯಲ್ ಮೀಡಿಯಾದಲ್ಲಿ ನಕಲಿ ಅಥವಾ ಖೋಟಾ ಪ್ರೊಫೈಲ್‌ಗಳನ್ನು ರಚಿಸುತ್ತಾರೆ. ಅವರು ಸಾಮಾನ್ಯವಾಗಿ ಹೀಗೆ ಮಾಡುತ್ತಾರೆ:
- ಹೆಸರಾಂತ ಮಾರಾಟಗಾರರು ಅಥವಾ ಬ್ರ್ಯಾಂಡ್‌ಗಳಂತೆ ನಟಿಸುತ್ತಾರೆ.
- ನಂಬಲಾಗದಂತಹ ಮತ್ತು ಒಳ್ಳೆಯದೆಂದು ತೋರುವ “ವಿಶೇಷ” ರಿಯಾಯಿತಿಗಳನ್ನು ನೀಡುತ್ತಾರೆ.
- ಉತ್ಪನ್ನದ ಕದ್ದ ಚಿತ್ರಗಳು ಮತ್ತು ನಕಲಿ ಟೆಸ್ಟಿಮೋನಿಯಲ್‌ಗಳನ್ನು ಬಳಸುತ್ತಾರೆ.
- UPI ಅಥವಾ ಬ್ಯಾಂಕ್ ವರ್ಗಾವಣೆಗಳ ಮೂಲಕ ಮುಂಚಿತವಾಗಿಯೇ ಪಾವತಿ ಮಾಡಲು ಒತ್ತಾಯಿಸುತ್ತಾರೆ, ನಂತರ ಕಣ್ಮರೆಯಾಗುತ್ತಾರೆ.
ಉದಾಹರಣೆಗೆ, ಒಂದು ನಕಲಿ ಸೋಶಿಯಲ್ ಮೀಡಿಯಾ ಪುಟವು ಜನಪ್ರಿಯ ಬ್ರ್ಯಾಂಡ್‌ಗಳ ಅರ್ಧದಷ್ಟು ಬೆಲೆಗೆ ಟ್ರೆಂಡಿ ಉಡುಪುಗಳನ್ನು ನೀಡುತ್ತೇವೆಂದು ಪ್ರದರ್ಶಿಸಬಹುದು. ಪಾವತಿ ಮಾಡಿದ ನಂತರ, ಖಾತೆಯು ಖರೀದಿದಾರರನ್ನು ಬ್ಲಾಕ್ ಮಾಡುತ್ತದೆ ಅಥವಾ ರಾತೋರಾತ್ರಿ ಕಣ್ಮರೆಯಾಗುತ್ತದೆ.
2. ನಕಲಿ ಆನ್‌ಲೈನ್ ವೆಬ್‌ಸೈಟ್‌ಗಳು
ನಕಲಿ ವೆಬ್‌ಸೈಟ್‌ಗಳನ್ನು ಸಾಮಾನ್ಯವಾಗಿ ಅಧಿಕೃತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಕಾಣುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಅವುಗಳು:
- ನಿಜವಾದ ಸೈಟ್‌ಗಳಿಗೆ ಹೋಲುವ ಡೊಮೇನ್ ಹೆಸರುಗಳನ್ನು ಬಳಸುತ್ತಾರೆ (xyz.in ಬದಲಿಗೆ xYz.in).
- ಖರೀದಿದಾರರನ್ನು ಆಕರ್ಷಿಸಲು ನಂಬಲಾಗದಷ್ಟು ಅಗ್ಗದ ಡೀಲ್‌ಗಳನ್ನು ನೀಡುತ್ತಾರೆ.
- ಅಸುರಕ್ಷಿತ ಪಾವತಿ ಗೇಟ್‌ವೇಗಳಿಂದಾಗಿ ನಿಮ್ಮ ಬ್ಯಾಂಕ್ ವಿವರಗಳನ್ನು ಅಪಾಯಕ್ಕೆ ಸಿಲುಕಿಸುತ್ತಾರೆ.
- ನಕಲಿ ಉತ್ಪನ್ನಗಳನ್ನು ಡೆಲಿವರಿ ಮಾಡುತ್ತಾರೆ, ಅಥವಾ ನಿಮಗೆ ಏನನ್ನೂ ಡೆಲಿವರಿ ಮಾಡುವುದೇ ಇಲ್ಲ.
ಈ ವೆಬ್‌ಸೈಟ್‌ಗಳು ಗ್ರಾಹಕರು ವೆಬ್‌ಸೈಟ್‌ನ ನಿಜವಾದ ಗುರುತು, ರಿಟರ್ನ್ ಪಾಲಿಸಿ ಅಥವಾ ಸಂಪರ್ಕ ವಿವರಗಳನ್ನು ಪರಿಶೀಲಿಸದಿರುವ ಪ್ರವೃತ್ತಿಯ ಲಾಭವನ್ನು ಪಡೆದುಕೊಳ್ಳುತ್ತದೆ.
ಎಚ್ಚರಿಕೆಯ ಕರೆಗಂಟೆಗಳು
ಸಾಮಾನ್ಯ ಎಚ್ಚರಿಕೆ ಕರೆಗಂಟೆಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಆನ್‌ಲೈನ್ ಶಾಪಿಂಗ್ ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು. ಕೆಲವು ಎಚ್ಚರಿಕೆ ಕರೆಗಂಟೆಗಳೆಂದರೆ:
- ನಂಬಲಾಗದ ರಿಯಾಯಿತಿಗಳು: ನಂಬಲಸಾಧ್ಯವಾದ ಡೀಲ್ ಎನಿಸಿದರೆ ಅದು ವಂಚನೆಯಾಗಿರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಎಚ್ಚರಿಕೆಯಿಂದಿರಿ.
- ಕ್ಯಾಶ್ ಆನ್ ಡೆಲಿವರಿ (COD) ಇಲ್ಲದಿರುವುದು: ವಂಚಕರು ಸಾಮಾನ್ಯವಾಗಿ ಮುಂಗಡ ಪಾವತಿಗಳಿಗೆ ಒತ್ತಾಯಿಸುತ್ತಾರೆ.
- ಅನುಮಾನಾಸ್ಪದ ವೆಬ್‌ಸೈಟ್ ವಿನ್ಯಾಸ: ಕಳಪೆ ಗ್ರಾಮರ್, ಅಸ್ಪಷ್ಟ ಚಿತ್ರಗಳು ಅಥವಾ ಕಾರ್ಯನಿರ್ವಹಿಸದ ಲಿಂಕ್‌ಗಳು, ವಂಚನೆಯ ಪ್ರಮುಖ ಸೂಚಕಗಳಾಗಿರುತ್ತವೆ.
- ಪರಿಶೀಲಿಸದ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳು: ಬ್ಲೂಟಿಕ್ ಅಥವಾ ಅಸಲಿ ಫಾಲೋವರ್‌ಗಳ ಸಂಖ್ಯೆಯನ್ನು ಪರಿಶೀಲಿಸಿ.
- ಗ್ರಾಹಕ ಬೆಂಬಲ ಲಭ್ಯವಿಲ್ಲದಿರುವುದು: ಕಾನೂನುಬದ್ಧ ವ್ಯವಹಾರಗಳು ಸ್ಪಷ್ಟವಾದ ರಿಟರ್ನ್/ಎಕ್ಸ್‌ಚೇಂಜ್ ಪಾಲಿಸಿಗಳು ಮತ್ತು ಸ್ಪಂದಿಸುವ ಗ್ರಾಹಕ ಸೇವೆಯನ್ನು ಒದಗಿಸುತ್ತವೆ.
ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ
ವಂಚಕರು ಹೆಚ್ಚು ಹೆಚ್ಚು ಬುದ್ದಿವಂತರಾಗುತ್ತಿದ್ದರೂ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
- ಖರೀದಿಸುವ ಮೊದಲು ಪರಿಶೀಲಿಸಿ: ಮಾರಾಟಗಾರ ಅಥವಾ ವೆಬ್‌ಸೈಟ್ ಕುರಿತು ವಿವರವಾದ ಮಾಹಿತಿಯನ್ನು ಪಡೆಯಿರಿ. ರಿವ್ಯೂಗಳಿಗಾಗಿ ಕೂಡಲೇ Google ನಲ್ಲಿ ಹುಡುಕಿ. ಇದರಿಂದ ವಂಚನೆಯ ಬಗ್ಗೆ ತಿಳಿದುಕೊಳ್ಳಬಹುದು.
- ವೆಬ್‌ಸೈಟ್ ಭದ್ರತೆಯನ್ನು ಪರಿಶೀಲಿಸಿ: ಪಾವತಿ ವಿವರಗಳನ್ನು ನಮೂದಿಸುವ ಮೊದಲು URL ನಲ್ಲಿ https:// ಮತ್ತು ಪ್ಯಾಡ್‌ಲಾಕ್ ಚಿಹ್ನೆಯನ್ನು ನೋಡಿ.
- ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ: ಈಗಾಗಲೇ ಒಳ್ಳೆಯ ಖ್ಯಾತಿಯನ್ನು ಹೊಂದಿರುವ ವಿಶ್ವಾಸಾರ್ಹ ಇ-ಕಾಮರ್ಸ್ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬಳಸಿ.
- ಸೋಶಿಯಲ್ ಮೀಡಿಯಾಗಳಲ್ಲಿ ಎಚ್ಚರದಿಂದಿರಿ: ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ನೋಡುವ ಪ್ರತಿಯೊಂದು ಪುಟ ಅಥವಾ ಜಾಹೀರಾತನ್ನು ನಂಬಬೇಡಿ. ಖಾತೆಯ ದೃಢೀಕರಣವನ್ನು ಪರಿಶೀಲಿಸಿ.
- ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡಿ: ನಕಲಿ ಪುಟಗಳನ್ನು ಆಯಾ ಡೊಮೇನ್‌ಗಳಿಗೆ ವರದಿ ಮಾಡಿ ಮತ್ತು ಸರ್ಕಾರದ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ಸೈಬರ್ ದೂರನ್ನು ನೋಂದಾಯಿಸಿ.
ನೆನಪಿಡಿ, ನಿಜವಾದ ವ್ಯವಹಾರಗಳು ಪಾರದರ್ಶಕತೆಯನ್ನು ಗೌರವಿಸುತ್ತವೆ, ಸುರಕ್ಷಿತ ಪಾವತಿ ಆಯ್ಕೆಗಳನ್ನು ಒದಗಿಸುತ್ತವೆ ಮತ್ತು ಕೂಡಲೇ ಪಾವತಿ ಮಾಡಿ ಎಂದಿಗೂ ನಿಮ್ಮ ಮೇಲೆ ಒತ್ತಡ ಹೇರುವುದಿಲ್ಲ.
ಮುಂದಿನ ಬಾರಿ ನೀವು ಸೋಶಿಯಲ್ ಮೀಡಿಯಾ ಅಥವಾ ನೀವು ಎಂದಿಗೂ ಕೇಳಿರದ ವೆಬ್‌ಸೈಟ್‌ನಲ್ಲಿ ನಂಬಲಾಗದ ಡೀಲ್‌ಗಳನ್ನು ನೋಡಿದಾಗ – ಅಲ್ಲಿಯೇ ತಡೆದು, ಪರಿಶೀಲಿಸಿ ಮತ್ತು “ಈಗಲೇ ಖರೀದಿಸಿ” ಎಂಬುದಕ್ಕೆ ಮುಂದುವರಿಯುವ ಮೊದಲು ಎರಡು ಬಾರಿ ಯೋಚಿಸಿ.
PhonePe ನಲ್ಲಿ ವಂಚನೆಯನ್ನು ವರದಿ ಮಾಡುವುದು ಹೇಗೆ
ನೀವು PhonePe ಮೂಲಕ ವಂಚನೆಗೆ ಗುರಿಯಾಗಿದ್ದರೆ, ಸಮಸ್ಯೆಯನ್ನು ವರದಿ ಮಾಡಲು ಹೀಗೆ ಮಾಡಿ:
1. PhonePe ಆ್ಯಪ್: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವಹಿವಾಟಿನಲ್ಲಿ ಸಮಸ್ಯೆ ಇದೆ” ಎಂಬ ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ಪ್ರಸ್ತಾಪಿಸಿ.
2. PhonePe ಗ್ರಾಹಕ ಬೆಂಬಲ ಸಂಖ್ಯೆ: ಸಮಸ್ಯೆಯನ್ನು ತಿಳಿಸಲು ನೀವು PhonePe ಗ್ರಾಹಕ ಬೆಂಬಲವನ್ನು 80–68727374 / 022–68727374 ನಲ್ಲಿ ಕರೆ ಮೂಲಕ ಸಂಪರ್ಕಿಸಬಹುದು, ನಂತರ ಗ್ರಾಹಕ ಬೆಂಬಲ ಸಿಬ್ಬಂದಿ, ಟಿಕೆಟ್ ಅನ್ನು ರಚಿಸಿ ನಿಮ್ಮ ಸಮಸ್ಯೆಗೆ ಸಹಾಯ ಮಾಡುತ್ತಾರೆ.
3. ಸೋಶಿಯಲ್ ಮೀಡಿಯಾ: ನೀವು ವಂಚನೆಯನ್ನು ಇಲ್ಲಿ ವರದಿ ಮಾಡಬಹುದು
Twitter — https://twitter.com/PhonePeSupport
Facebook — https://www.facebook.com/OfficialPhonePe
4. ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರನ್ನು ವರದಿ ಮಾಡಲು ನೀವು https://grievance.phonepe.com/ ಗೆ ಲಾಗಿನ್ ಆಗಬಹುದು ಮತ್ತು ಈ ಹಿಂದೆ ರಚಿಸಲಾದ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.
5. ಸೈಬರ್ ಸೆಲ್: ಕೊನೆಯದಾಗಿ, ನೀವು ವಂಚನೆಗೆ ಸಂಬಂಧಿಸಿದ ದೂರುಗಳನ್ನು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವರದಿ ಮಾಡಬಹುದು ಅಥವಾ https://www.cybercrime.gov.in/ ಮೂಲಕ ಆನ್‌ಲೈನ್‌ನಲ್ಲಿ ದೂರು ನೋಂದಾಯಿಸಬಹುದು ಅಥವಾ 1930 ನಲ್ಲಿ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಪ್ರಮುಖ ಸೂಚನೆ — PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಬಂದಿರದ, ಆದರೆ PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಎಲ್ಲ ಇಮೇಲ್‌ಗಳನ್ನು ನಿರ್ಲಕ್ಷಿಸಿ. ವಂಚನೆ ನಡೆದಿದೆ ಎಂದು ನಿಮಗೆ ಅನುಮಾನ ಉಂಟಾದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.