
Trust & Safety
ಡಿಜಿಟಲ್ ಹಣ ಪಡೆದು ನಗದು ಕೊಡುವ ವಂಚನೆ: UPI ಹಣ ಪಡೆದು ಕೈಗೆ ನಗದು ಯಾಕೆ ನೀಡಬಾರದು?
PhonePe Regional|3 min read|11 September, 2026
ನೀವು ಅಂಗಡಿ ನಡೆಸುತ್ತಿದ್ದರೆ, ಚಿಲ್ಲರೆ ಕೇಳಿಕೊಂಡು ಬರುವ ಗ್ರಾಹಕರು ನಿಮಗೇನೂ ಹೊಸಬರಲ್ಲ. ಆದರೆ ಡಿಜಿಟಲ್ ಪಾವತಿಯ ಈ ಯುಗದಲ್ಲಿ, ಈ ಚಿಲ್ಲರೆ ವ್ಯವಹಾರವು ಸಂಪೂರ್ಣ ಹೊಸ ಮತ್ತು ಅಪಾಯಕಾರಿ ರೂಪ ಪಡೆದುಕೊಂಡಿದೆ. ಇಂದು ಅನೇಕ ಜನರು ಚಿಲ್ಲರೆಗಾಗಿ ಅಲ್ಲ, ಬದಲಾಗಿ ಡಿಜಿಟಲ್ ರೂಪದಲ್ಲಿ ಹಣ ಕಳುಹಿಸಿ, ಅದಕ್ಕೆ ಬದಲಾಗಿ ನಿಮ್ಮಿಂದ ‘ನಗದು ಹಣ’ ಪಡೆಯಲು ಬರುತ್ತಾರೆ.
ಇದು ಮೇಲ್ನೋಟಕ್ಕೆ ಸಹಾಯ ಮಾಡುವ ಸಣ್ಣ ವಿಷಯವೆಂದು ತೋರಿದರೂ, ವಂಚಕರು ನಿಮ್ಮ ಈ ಒಳ್ಳೆಯತನ ಮತ್ತು ಪ್ರಾಮಾಣಿಕತೆಯನ್ನೇ ದುರುಪಯೋಗಪಡಿಸಿಕೊಂಡು ಸುಲಭವಾಗಿ ಹಣ ದೋಚಬಹುದು. ಆದ್ದರಿಂದ, ಪ್ರತಿಯೊಬ್ಬ ವ್ಯಾಪಾರಿಯೂ ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿಯೇ ಈ ವಂಚನೆ ಹೇಗೆ ನಡೆಯುತ್ತದೆ ಮತ್ತು ಇದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂದು.
ನಿಮ್ಮ ವ್ಯಾಪಾರಕ್ಕಾಗಿ UPI
‘ಡಿಜಿಟಲ್ ಹಣದ ಬದಲಿಗೆ ನಗದು’ ವಂಚನೆಯು ಹೇಗೆ ನಡೆಯುತ್ತದೆ ಎಂದು ತಿಳಿಯುವ ಮೊದಲು, PhonePe ವ್ಯಾಪಾರಿಗಳಿಗೆ ನೀಡುವ ‘PhonePe Business’ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಡಿಜಿಟಲ್ ವಹಿವಾಟುಗಳು ಚಾಲ್ತಿಗೆ ಬರುವ ಮುಂಚಿನಿಂದಲೂ ನೀವು ಅಂಗಡಿಯನ್ನು ನಡೆಸುತ್ತಿದ್ದರೆ, ನಗದು ಪಾವತಿಯಿಂದ ಡಿಜಿಟಲ್ ಪಾವತಿಗೆ ಬದಲಾದ ಕ್ರಾಂತಿಯನ್ನು ನೀವು ಖುದ್ದಾಗಿ ಕಂಡಿರುತ್ತೀರಿ. ಇಂದು, ಒಂದು ಕಪ್ ಚಹಾದ ಸಣ್ಣ ಮೊತ್ತದ ಪಾವತಿಯಿಂದ ಹಿಡಿದು ದೊಡ್ಡ ಚಿಲ್ಲರೆ ವ್ಯಾಪಾರದ ಬಿಲ್‌ಗಳನ್ನು ಪಾವತಿಸುವವರೆಗೆ ಎಲ್ಲವನ್ನೂ UPI QR ಕೋಡ್‌ಗಳು ಹಣ ಪಡೆಯುವುದನ್ನು ಸರಳಗೊಳಿಸಿವೆ.
PhonePe ಪ್ರತಿಯೊಬ್ಬ ವ್ಯಾಪಾರಿಗೆ ಪ್ರತ್ಯೇಕ QR ಕೋಡ್ ನೀಡುತ್ತದೆ. ಇದನ್ನು ಗ್ರಾಹಕರಿಗೆ ಮಾರಾಟ ಮಾಡುವ ವಸ್ತುಗಳು ಅಥವಾ ಸೇವೆಗಳಿಗೆ ಹಣ ಪಡೆಯಲು ಮಾತ್ರ ಬಳಸಬೇಕು. ಇವುಗಳನ್ನು ಕೇವಲ ಅಧಿಕೃತ ವ್ಯಾಪಾರ ವಹಿವಾಟುಗಳಿಗೆ ಮಾತ್ರ ಬಳಸಬೇಕು ಎಂಬುದನ್ನು ಗಮನಿಸುವುದು ಮುಖ್ಯ. ಆದರೆ, ಇತ್ತೀಚೆಗೆ QR ಕೋಡ್ ಬಳಸಿ ಡಿಜಿಟಲ್ ಹಣ ಪಡೆದು, ಪ್ರತಿಯಾಗಿ ಕೈಗೆ ನಗದು ನೀಡುವ ಅಭ್ಯಾಸ ಹೆಚ್ಚಾಗಿದೆ. QR ಕೋಡ್ ಬಳಸಿ ಡಿಜಿಟಲ್ ಹಣವನ್ನು ನಗದಾಗಿ ಬದಲಾಯಿಸುವ ಈ ಅಭ್ಯಾಸವನ್ನು ‘ATM ಸೇವೆಗಾಗಿ QR’ ಎಂದು ಕರೆಯಲಾಗುತ್ತದೆ.
ಒಬ್ಬ ವ್ಯಾಪಾರಿಯಾಗಿ ನೀವು ಸಹಾಯ ಮಾಡುವ ಮನಸ್ಸಿನಿಂದ ಅಥವಾ ವ್ಯಾಪಾರದ ಹಿತದೃಷ್ಟಿಯಿಂದ ಹೀಗೆ ಮಾಡಬಹುದು. ಆದರೆ ಇದರಲ್ಲಿ ಹಲವು ಅಪಾಯಗಳಿವೆ. QR ಕೋಡ್‌ಗಳ ಮೂಲಕ ಪಾವತಿಗಳನ್ನು ಸ್ವೀಕರಿಸುವುದು ವೇಗ ಮತ್ತು ಸುರಕ್ಷಿತವೆಂದು ತೋರಬಹುದಾದರೂ, ವ್ಯಾಪಾರದ QR ಅನ್ನು ತಪ್ಪಾಗಿ ಬಳಸುವುದರಿಂದ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಬಹುದು, ಹಣ ನಷ್ಟವಾಗಬಹುದು ಮತ್ತು ಗಂಭೀರ ಕಾನೂನು ತೊಂದರೆಗಳಾಗಬಹುದು.
ಡಿಜಿಟಲ್ ಹಣ ಪಡೆದು ನಗದು ಕೊಡುವ ವಂಚನೆ ಹೇಗೆ ನಡೆಯುತ್ತದೆ?
ಒಬ್ಬ ವ್ಯಕ್ತಿ ನಿಮ್ಮ ಅಂಗಡಿಗೆ ಬಂದು, ತಾನು ತುಂಬಾ ತುರ್ತು ಪರಿಸ್ಥಿತಿಯಲ್ಲಿದ್ದೇನೆ ಎಂದು ಹೇಳಿ ತಕ್ಷಣ ₹5,000 ನಗದು ಕೇಳುತ್ತಾನೆ. ನಗದಿಗೆ ಬದಲಾಗಿ UPI ಮೂಲಕ ಹಣ ವರ್ಗಾಯಿಸುವುದಾಗಿ ಮತ್ತು ಸಹಾಯ ಮಾಡಿದ್ದಕ್ಕಾಗಿ ಸಣ್ಣ “ಕಮಿಷನ್” ನೀಡುವುದಾಗಿಯೂ ಹೇಳುತ್ತಾನೆ. ಬ್ಯಾಂಕಿಗೆ ಹೋಗಿ ಹಣ ಜಮಾ ಮಾಡುವ ಶ್ರಮ ತಪ್ಪುತ್ತದೆ ಎಂದು ಭಾವಿಸಿ ನೀವು ಹಣ ನೀಡಲು ಒಪ್ಪುತ್ತೀರಿ.
ವಂಚಕನು ಈ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಹೇಗೆ ಬಳಸಿಕೊಳ್ಳುತ್ತಾನೆ:
ಸನ್ನಿವೇಶ 1: ವಂಚಕ ನಕಲಿ ಪಾವತಿ ಆ್ಯಪ್ ಬಳಸಿ ₹5,000 ರೂಪಾಯಿ ಕಳುಹಿಸಿದಂತೆ ನಟಿಸುತ್ತಾನೆ. ಮೊಬೈಲ್‌ನಲ್ಲಿ ‘ಹಣ ಯಶಸ್ವಿಯಾಗಿ ತಲುಪಿದೆ’ ಎಂದು ತೋರಿಸುವ ನಕಲಿ ಸ್ಕ್ರೀನ್ ತೋರಿಸಿ, ತರಾತುರಿಯಲ್ಲಿ ನಿಮ್ಮಿಂದ ನಗದು ಪಡೆದು ಹೊರಟುಹೋಗುತ್ತಾನೆ. ನಂತರ ನೀವು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಯಾವುದೇ ಹಣ ಜಮೆಯಾಗಿರುವುದಿಲ್ಲ, ಆಗ ನೀವು ವಂಚನೆಗೆ ಒಳಗಾಗಿದ್ದೀರಿ ಎಂದು ತಿಳಿಯುತ್ತದೆ.
ಸನ್ನಿವೇಶ 2: ವಂಚಕ ನಿಜವಾಗಿಯೂ UPI ಮೂಲಕ ₹5,000 ಕಳುಹಿಸಿ, ನಿಮ್ಮಿಂದ ನಗದು ಹಣ ಪಡೆದುಕೊಳ್ಳುತ್ತಾನೆ. ಆದರೆ ನೀವು ಅವನಿಗೆ ನಗದು ಹಣ ಕೊಟ್ಟಿದ್ದೀರಿ ಎಂಬುದಕ್ಕೆ ನಿಮ್ಮ ಬಳಿ ಯಾವುದೇ ಡಿಜಿಟಲ್ ಸಾಕ್ಷಿ ಇರುವುದಿಲ್ಲ. ನಂತರ ವಂಚಕ, “ನನ್ನ ಹಣ ತಪ್ಪಾಗಿ ವರ್ಗಾವಣೆಯಾಗಿದೆ” ಎಂದು ಬ್ಯಾಂಕ್‌ಗೆ ದೂರು (Chargeback) ನೀಡುತ್ತಾನೆ. ಈ ದೂರಿನ ತನಿಖೆ ಮುಗಿಯುವವರೆಗೆ (ಇದಕ್ಕಾಗಿ ನೀವು ಸಾಕ್ಷಿ ಸಲ್ಲಿಸಬೇಕಾಗುತ್ತದೆ), ನಿಮ್ಮ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಬಹುದು. ಇದರಿಂದ ನೇರವಾಗಿ ನಿಮ್ಮ ವ್ಯಾಪಾರಕ್ಕೆ ಮತ್ತು ಹಣಕಾಸಿಗೆ ನಷ್ಟ ಉಂಟಾಗುತ್ತದೆ.
ಸನ್ನಿವೇಶ 3: ವಂಚಕ ಕದ್ದ ಕ್ರೆಡಿಟ್ ಕಾರ್ಡ್, ಹ್ಯಾಕ್ ಮಾಡಿದ RuPay-on-UPI ಖಾತೆ ಅಥವಾ ಸೈಬರ್ ವಂಚನೆಯಿಂದ ಬಂದ ಹಣವನ್ನು ಬಳಸಿ ನಿಮಗೆ QR ಟ್ರಾನ್ಸ್‌ಫರ್ ಮಾಡಿರಬಹುದು. ಇದರಿಂದ ನಿಮ್ಮ ವ್ಯಾಪಾರದ ಖಾತೆಯು ಅಕ್ರಮ ಹಣ ವರ್ಗಾವಣೆಗೆ (Money laundering) ಲಿಂಕ್ ಆಗುತ್ತದೆ. ಗೃಹ ಸಚಿವಾಲಯ (MHA) ಮತ್ತು ನಿಯಂತ್ರಣ ಪ್ರಾಧಿಕಾರಗಳ ಮಾರ್ಗಸೂಚಿಗಳ ಪ್ರಕಾರ, ತೊಂದರೆಗೊಳಗಾದ ವ್ಯಕ್ತಿ 1930 ಸೈಬರ್ ಕ್ರೈಮ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರೆ, RBI ಮತ್ತು ಗೃಹ ಸಚಿವಾಲಯದ ನಿಯಮಗಳಂತೆ ಪೊಲೀಸರು ತನಿಖೆ ನಡೆಸುತ್ತಾರೆ. ತನಿಖೆ ಮುಗಿಯುವವರೆಗೆ ನಿಮ್ಮ ವ್ಯಾಪಾರದ ಖಾತೆಯನ್ನು ಬ್ಲಾಕ್ ಮಾಡಬಹುದು. ಹೀಗೆ ನೀವು ಅರಿಯದೆಯೇ ಅಪರಾಧದಲ್ಲಿ ಭಾಗಿಯಾಗಬಹುದು ಮತ್ತು ಇದರಿಂದ ನಿಮ್ಮ ವ್ಯಾಪಾರ ವಾರಗಳ ಅಥವಾ ತಿಂಗಳ ಕಾಲ ಸ್ಥಗಿತಗೊಳ್ಳಬಹುದು.
ಸಂತೋಷದ ವಿಷಯವೆಂದರೆ, ಕೆಲವು ಸರಳ ಅಭ್ಯಾಸಗಳನ್ನು ಅನುಸರಿಸುವ ಮೂಲಕ ಈ ಮೂರೂ ರೀತಿಯ ವಂಚನೆಗಳಿಂದ ಪಾರಾಗಬಹುದು.
ಡಿಜಿಟಲ್ ಹಣ ಪಡೆದು ನಗದು ಕೊಡುವ ವಂಚನೆಯಿಂದ ಪಾರಾಗುವುದು ಹೇಗೆ?
ನಿಮ್ಮ ವ್ಯಾಪಾರ ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಯಲು ನೀವು RBI ಮಾರ್ಗಸೂಚಿಗಳನ್ನು ಅನುಸರಿಸಬೇಕು. ಈ ಕೆಳಗಿನ ಅಭ್ಯಾಸಗಳು ನಿಮ್ಮ ವ್ಯಾಪಾರವನ್ನು ಯಾವುದೇ ತೊಂದರೆಯಿಲ್ಲದೆ ನಡೆಸಲು ಸಹಾಯ ಮಾಡುತ್ತವೆ.
1. ವ್ಯಾಪಾರದ ಖಾತೆಯನ್ನು ವ್ಯಾಪಾರಕ್ಕೆ ಮಾತ್ರ ಬಳಸಿ:
ನಿಮ್ಮ ಮರ್ಚೆಂಟ್ (ವ್ಯಾಪಾರಿ) ಖಾತೆಯು ನಿಮ್ಮ ವ್ಯಾಪಾರಕ್ಕಾಗಿ ಮಾತ್ರ ವಿನ್ಯಾಸಗೊಳಿಸಲಾದ ವ್ಯವಸ್ಥೆಯಾಗಿದೆ. ನೀವು ಮಾರಾಟ ಮಾಡುವ ವಸ್ತುಗಳು ಅಥವಾ ನೀಡುವ ಸೇವೆಗಳಿಗೆ ಪ್ರತಿಯಾಗಿ ಹಣ ಪಡೆಯಲು ಮಾತ್ರ ಇದನ್ನು ಬಳಸಿ.
- ನಗದು ನೀಡುವುದನ್ನು ತಪ್ಪಿಸಿ: ವ್ಯಾಪಾರಿಯಾಗಿ, ನೈಜ ಮಾರಾಟವನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ನಿಮ್ಮ ವ್ಯಾಪಾರ ಖಾತೆಯ ಮೂಲಕ ಹಣವನ್ನು ಸ್ವೀಕರಿಸಬೇಡಿ ಅಥವಾ ಕಳುಹಿಸಬೇಡಿ.
- ನಿಮ್ಮ ಸಿಬ್ಬಂದಿಗೆ ಜಾಗೃತಿ ಮೂಡಿಸಿ: ನಿಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ವಂಚನೆಯ ಬಗ್ಗೆ ತಿಳಿಸಿ, ಯಾವುದೇ ಕಾರಣಕ್ಕೂ ಡಿಜಿಟಲ್ ಹಣ ಪಡೆದು ನಗದು ನೀಡದಂತೆ ಸೂಚಿಸಿ.
- ಪಾರದರ್ಶಕತೆ ಕಾಯ್ದುಕೊಳ್ಳಿ: ಅನಗತ್ಯ ವಿವಾದಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಂದು ವಹಿವಾಟನ್ನು ಉದ್ದೇಶಪೂರ್ವಕವಾಗಿ ಮತ್ತು ಪಾರದರ್ಶಕವಾಗಿರಿಸಿ.
2. ATM ಸೇವೆ ಮತ್ತು ನಗದು ವಿನಿಮಯವನ್ನು ತಪ್ಪಿಸಿ
PhonePe ವ್ಯಾಪಾರಿಗಳು ATM-ಮಾದರಿಯ ಸೇವೆಗಳನ್ನು ಅಥವಾ ನಗದು ವಿನಿಮಯವನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಏಕೆ?: ವ್ಯಾಪಾರಿ ಖಾತೆಗಳ ಮೂಲಕ ನಗದು ವಿನಿಮಯ ಮಾಡುವುದು ನಿಯಂತ್ರಕ ನಿಯಮಗಳ ಉಲ್ಲಂಘನೆಯಾಗಿದೆ ಮತ್ತು ವಹಿವಾಟಿನ ಹೊಣಗಾರಿಕೆಯ ನಷ್ಟ ಸೇರಿದಂತೆ ಗಮನಾರ್ಹ ಅಪಾಯಗಳನ್ನು ಉಂಟುಮಾಡುತ್ತದೆ.
- ಪರಿಣಾಮ: ವ್ಯಾಪಾರಿ ನೀತಿಯ ವ್ಯಾಪ್ತಿಗೆ ಬಾರದ ಚಟುವಟಿಕೆಗಳಲ್ಲಿ ತೊಡಗುವುದು ನಮ್ಮ ಪ್ಲಾಟ್‌ಫಾರ್ಮ್‌ನ ಸುರಕ್ಷತೆಯನ್ನು ಧಕ್ಕೆಗೆ ತರುತ್ತದೆ. ಆದ್ದರಿಂದ ನೀತಿಯ ಉಲ್ಲಂಘನೆಯು ವ್ಯಾಪಾರಿ ಖಾತೆಯ ಅಮಾನತು ಅಥವಾ ಕಾಯಂ ಬ್ಲಾಕ್ ಮಾಡಲು ಕಾರಣವಾಗಬಹುದು.
3. ನಿಮ್ಮ ಸ್ವಂತ ಸಾಧನದಲ್ಲಿ ಮಾತ್ರ ಪಾವತಿಗಳನ್ನು ಪರಿಶೀಲಿಸಿ
ವಂಚಕರು ನಕಲಿ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ಹಣ ಕಳುಹಿಸಿದ್ದೇವೆ ಎಂದು ನಂಬಿಸುತ್ತಾರೆ. ಅಂತಹ ವಂಚನೆಗಳಿಗೆ ಬೀಳುವುದನ್ನು ತಪ್ಪಿಸಲು, ಯಾವಾಗಲೂ ನಿಮ್ಮ ಸ್ವಂತ ಸಾಧನದಲ್ಲಿ ಪಾವತಿಯನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ. ಅವರು ತೋರಿಸುವ ಸ್ಕ್ರೀನ್‌ಶಾಟ್‌ಗಳು ಅಥವಾ ಪಾಪ್-ಅಪ್‌ಗಳನ್ನು ನಂಬಬೇಡಿ, ನಿಮ್ಮ ಸ್ವಂತ PhonePe ಅಪ್ಲಿಕೇಶನ್‌ನಲ್ಲಿ ಪರಿಶೀಲಿಸಿ ಅಥವಾ ಬ್ಯಾಂಕ್‌ನಿಂದ SMS ಗಾಗಿ ನಿರೀಕ್ಷಿಸಿ.
ನೀವು ವಂಚನೆಗೆ ಒಳಗಾದರೆ ಏನು ಮಾಡಬೇಕು?
ಒಂದು ವೇಳೆ ನೀವು ಇಂತಹ ವಂಚನೆಗೆ ಒಳಗಾಗಿದ್ದರೆ, ತಕ್ಷಣವೇ ವರದಿ ಮಾಡಿ. ಪ್ರತಿಯೊಂದು ಸೆಕೆಂಡೂ ಮುಖ್ಯವಾಗಿರುತ್ತದೆ.
PhonePe ನಲ್ಲಿ ವರದಿ ಮಾಡುವುದು:
- PhonePe Business ಆ್ಯಪ್: ಸಹಾಯ (Help) ವಿಭಾಗಕ್ಕೆ ಹೋಗಿ ಮತ್ತು Help/ಸಹಾಯ ಬಟನ್ ಮೇಲೆ ಕ್ಲಿಕ್ ಮಾಡಿ.
- PhonePe ಗ್ರಾಹಕ ಸೇವೆ: 080-68727374 / 022-68727374 ಗೆ ಕರೆ ಮಾಡಿ.
- ಲಾಗಿನ್ ಹಂತದ ತೊಂದರೆಗಳು L : https://support.phonepe.com/ ಮೂಲಕ ಸಪೋರ್ಟ್ ಟಿಕೆಟ್ ರಚಿಸಿ.
- ಸಾಮಾಜಿಕ ಜಾಲತಾಣಗಳು:
- Twitter: PhonePe Support
- Facebook: PhonePe Official
- ದೂರು ಪರಿಹಾರ: PhonePe ಕುಂದುಕೊರತೆ ಪೋರ್ಟಲ್‌ನಲ್ಲಿ ದೂರು ದಾಖಲಿಸಿ.
ಅಧಿಕಾರಿಗಳಿಗೆ ವರದಿ ಮಾಡುವುದು:
- ಸೈಬರ್ ಕ್ರೈಮ್: ಸೈಬರ್ ಕ್ರೈಂ ಪೋರ್ಟಲ್‌ನಲ್ಲಿಆನ್‌ಲೈನ್ ದೂರು ನೀಡಿ ಅಥವಾ 1930 ಕ್ಕೆ ಕರೆ ಮಾಡಿ.
- ದೂರಸಂಪರ್ಕ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp / ಟೆಲಿಗ್ರಾಮ್ ವಂಚನೆಯನ್ನು ವರದಿ ಮಾಡಿ.
ಮುಖ್ಯವಾದ ವಿಷಯ — PhonePe ಎಂದಿಗೂ ನಿಮ್ಮ ರಹಸ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಬಾರದ ಮತ್ತು PhonePe ಹೆಸರಿನಲ್ಲಿ ಬರುವ ಎಲ್ಲಾ ಇಮೇಲ್‌ಗಳನ್ನು ನಿರ್ಲಕ್ಷಿಸಿ. ನೀವು ವಂಚನೆಯನ್ನು ಶಂಕಿಸಿದರೆ, ದಯವಿಟ್ಟು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ.
