Trust & Safety
EMI ವಂಚನೆಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವ ಮಾರ್ಗ ಇಲ್ಲಿದೆ
PhonePe Regional|2 min read|04 May, 2021
RBI ಇತ್ತೀಚೆಗೆ ಸಾಲಗಾರರಿಗೆ ತಮ್ಮ EMI / ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮೂರು ತಿಂಗಳವರೆಗೆ ಮುಂದೂಡಲು ವಿಸ್ತರಣೆಯನ್ನು ನೀಡಿದೆ. ಮರುಪಾವತಿ ವೇಳಾಪಟ್ಟಿಯಲ್ಲಿನ ಈ ಬದಲಾವಣೆಯು ಗ್ರಾಹಕರಿಗೆ ಸಾಲ ಮರುಪಾವತಿಯಿಂದ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ.
ಈ ಬೆಳವಣಿಗೆಯನ್ನು ತಕ್ಷಣವೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ವಂಚಕರು ಸಿದ್ಧರಾಗಿದ್ದಾರೆ. ಅವರು ಬ್ಯಾಂಕ್ ಪ್ರತಿನಿಧಿಗಳಂತೆ ನಟಿಸುತ್ತಾ, ಸಾಲಗಾರರಿಗೆ ಈ ವಿಸ್ತರಣೆಯ ಪ್ರಯೋಜನ ನೀಡುತ್ತೇವೆ ಎಂದು ಹೇಳಿ ಮೋಸ ಮಾಡಲು ಮುಂದಾಗುತ್ತಿರುವುದರಿಂದಾಗಿ, EMI ವಂಚನೆಗಳು ಹೆಚ್ಚುತ್ತಿವೆ.
ಈ ಕೆಳಗಿನ ವಿಧಾನಗಳನ್ನು ಬಳಸಿ ವಂಚಕರು ಮೋಸ ಮಾಡುತ್ತಾರೆ:
ಸನ್ನಿವೇಶ 1: ನಿಮ್ಮ ಬ್ಯಾಂಕಿನ ಪ್ರತಿನಿಧಿ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ನಿಮಗೆ ಕರೆ ಮಾಡುತ್ತಾನೆ. ನಿಮ್ಮ ಸಾಲದ EMI ಅನ್ನು ಮುಂದೂಡಲು ನಿಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡ್ ಸಂಖ್ಯೆ, CVV ನೀಡಲು ಆ ವ್ಯಕ್ತಿ ವಿನಂತಿಸುತ್ತಾನೆ. ಒಮ್ಮೆ ನೀವು ಈ ವಿವರಗಳನ್ನು ಹಂಚಿಕೊಂಡ ನಂತರ, ಆ ವಂಚಕ ಒಂದು ವಹಿವಾಟನ್ನು ಪ್ರಾರಂಭಿಸುತ್ತಾನೆ ಮತ್ತು ನಿಮ್ಮ ಫೋನ್‌ಗೆ ಕಳುಹಿಸಿದ OTP ಯನ್ನು ಕೇಳುತ್ತಾನೆ. ಒಮ್ಮೆ ನೀವು ಈ OTP ಯನ್ನು ಆತನಿಗೆ ನೀಡಿದರೆ, ನಿಮ್ಮ ಖಾತೆಯಲ್ಲಿರುವ ಹಣವು ಕಡಿತಗೊಳ್ಳುತ್ತದೆ.
ಸನ್ನಿವೇಶ 2: ವಂಚಕನೊಬ್ಬ ಬ್ಯಾಂಕ್ ಪ್ರತಿನಿಧಿಯಾಗಿ ನಟಿಸುತ್ತಾ ನಿಮ್ಮ EMI ಅನ್ನು ವಿಸ್ತರಿಸಲಾಗಿದೆ ಎಂದು ಹೇಳಲು ಕರೆ ಮಾಡುತ್ತಾನೆ. ಆ ವಿಸ್ತರಣೆಯನ್ನು ಸ್ವೀಕರಿಸಲು ತಾನು ಕಳಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಲು ಅಥವಾ PhonePe ಆ್ಯಪ್ ಅನ್ನು ನೇರವಾಗಿ ತೆರೆಯಲು ಕೇಳುತ್ತಾನೆ. ಅಧಿಸೂಚನೆ ಐಕಾನ್‌ನಲ್ಲಿ ಸ್ವೀಕರಿಸಿದ ವಿನಂತಿಯನ್ನು ನಿಮ್ಮ UPI ಪಿನ್ ನಮೂದಿಸುವ ಮೂಲಕ ಅನುಮೋದಿಸಲು ಆತ ನಿಮ್ಮನ್ನು ಕೇಳಬಹುದು. ಕೆಲವು ಸಂದರ್ಭಗಳಲ್ಲಿ, ಆ ವಂಚಕನು ಬ್ಯಾಂಕುಗಳ ಹೆಸರುಗಳು ಮತ್ತು ಲೋಗೊಗಳನ್ನು ಬಳಸಿ “ಸಾಲ EMI ಮುಂದೂಡಲು ವಿನಂತಿಯನ್ನು ಅನುಮೋದಿಸಿ” ಎಂಬ ಸಂದೇಶ ಕಳಿಸಬಹುದು. ನೀವು ವಿನಂತಿಯನ್ನು ಅಂಗೀಕರಿಸಿದಲ್ಲಿ, ಆಗ ನಿಮ್ಮ ಹಣವು ಕಡಿತಗೊಳ್ಳುತ್ತದೆ.
ಸನ್ನಿವೇಶ 3: ‘ಬ್ಯಾಂಕ್ ಅಧಿಕಾರಿ’ಯೊಬ್ಬ ನಿಮಗೆ ಕರೆ ಮಾಡಿ ನಿಮ್ಮ EMI ಪಾವತಿಸದ ಕಾರಣ ನಿಮಗೆ ದಂಡ ವಿಧಿಸಲಾಗುವುದು ಎಂದು ಹೇಳುತ್ತಾನೆ. ನಂತರ ನಿಮಗೆ ಸಹಾಯ ಮಾಡುವ ನೆಪವೊಡ್ಡಿ, ನಿಮಗೆ AnyDesk ಆ್ಯಪ್ ಅಥವಾ ಯಾವುದೇ ಸ್ಕ್ರೀನ್-ಶೇರಿಂಗ್ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲು ಹೇಳುತ್ತಾನೆ. ನಿಮ್ಮ ಸಾಧನವನ್ನು ದೂರದಿಂದಲೇ ನಿಯಂತ್ರಿಸುವ ಅವಕಾಶ ದೊರೆತ ನಂತರ, ಆ ‘ಬ್ಯಾಂಕ್ ಅಧಿಕಾರಿ’ ಎಂದು ಹೇಳಿಕೊಳ್ಳುವ ವಂಚಕ, ಆತನಿಗೆ ದೊರೆಯುವ ನಿಮ್ಮ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಪಿನ್ ಮತ್ತು ಪಾಸ್‌ವರ್ಡ್‌ಗಳ ಸಹಾಯದಿಂದ ನಿಮ್ಮ ಖಾತೆ ವಿವರಗಳನ್ನು ಪಡೆದುಬಿಡುತ್ತಾನೆ. ಅಷ್ಟಾದರೆ, ನಿಮ್ಮ ಹಣವು ಆ ವಂಚಕನ ಕೈ ಸೇರಿದಂತೆಯೇ.
ಆದ್ದರಿಂದ, ದಯವಿಟ್ಟು ಬ್ಯಾಂಕ್ ಪ್ರತಿನಿಧಿಗಳು ಎಂದು ಹೇಳಿಕೊಂಡು ಕರೆ ಮಾಡುವ ಅಪರಿಚಿತರ ಕುರಿತು ಮತ್ತು ಮೇಲೆ ವಿವರಿಸಿದಂತಹ ಸನ್ನಿವೇಶಗಳನ್ನು ಬಳಸಿಕೊಂಡು ಸೇವೆಗಳನ್ನು ನೀಡುವ ಬಗ್ಗೆ ಮಾತನಾಡಿದಲ್ಲಿ ಅದರ ಕುರಿತು ಎಚ್ಚರದಿಂದಿರಿ. ನಿಮ್ಮ ಬ್ಯಾಂಕ್ ನಿಮ್ಮ EMI ಗಳ ವಿಸ್ತರಣೆಯನ್ನು PhonePe ಮೂಲಕ ಮಾಡಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿ. ಅಲ್ಲದೆ, EMI ಗಳನ್ನು ಮುಂದೂಡಲು ನೀವು OTP ಹಂಚಿಕೊಳ್ಳುವ ಅಥವಾ ನಿಮ್ಮ UPI ಪಿನ್ ನಮೂದಿಸುವ ಅಗತ್ಯವಿಲ್ಲ.
ನೀವು ಸುರಕ್ಷಿತವಾಗಿರಲು ಈ ಕೆಳಗಿನವುಗಳನ್ನು ಮಾಡಿ:
- ನಿಮ್ಮ ಗೌಪ್ಯ ವಿವರಗಳಾದ ಬ್ಯಾಂಕ್ ಕಾರ್ಡ್ ಸಂಖ್ಯೆ, CVV, ಮುಕ್ತಾಯ ದಿನಾಂಕ, ಪಿನ್ ಅಥವಾ OTP ಮುಂತಾದವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. PhonePe ಪ್ರತಿನಿಧಿಯಂತೆ ನಟಿಸುವ ಯಾರಾದರೂ ಅಂತಹ ವಿವರಗಳನ್ನು ಕೇಳಿದರೆ, ದಯವಿಟ್ಟು ನಿಮಗೆ ಇಮೇಲ್ ಕಳುಹಿಸಲು ಅವರಿಗೆ ತಿಳಿಸಿ. ಮತ್ತು @phonepe.com ಡೊಮೇನ್‌ನಿಂದ ಬರುವ ಇಮೇಲ್‌ಗಳಿಗೆ ಮಾತ್ರ ಪ್ರತಿಕ್ರಿಯಿಸಿ.
- ಎಲ್ಲಾ ಬ್ಯಾಂಕ್ ಇಮೇಲ್‌ಗಳು ಸುರಕ್ಷಿತ https ಡೊಮೇನ್‌ನಿಂದ ಮಾತ್ರ ಬರುತ್ತವೆ. ಅದಲ್ಲದೇ [XYZ]@gmail.com ಅಥವಾ ಇನ್ನಿತರ ಇಮೇಲ್ ಸೇವಾದಾರರ ಡೊಮೇನ್‌ನಿಂದ ಬರುವ ಯಾವುದೇ ಇಮೇಲ್‌ಗಳನ್ನು ನಿರ್ಲಕ್ಷಿಸಿ.
- PhonePe ಯಲ್ಲಿ ನೀವು ಬೇರೆಯವರಿಂದ ಹಣ ಸ್ವೀಕರಿಸಲು ‘ಪಾವತಿ’ ಮಾಡುವ ಅಥವಾ ನಿಮ್ಮ UPI ಪಿನ್ ನಮೂದಿಸುವ ಅಗತ್ಯವಿಲ್ಲ ಎಂಬುದನ್ನು ಯಾವತ್ತೂ ನೆನಪಿಡಿ.
- ‘ಪಾವತಿಸಿ’ ಅನ್ನು ಒತ್ತುವ ಅಥವಾ ನಿಮ್ಮ UPI PIN ನಮೂದಿಸುವ ಮೊದಲು, ದಯವಿಟ್ಟು ನಿಮ್ಮ PhonePe ಆ್ಯಪ್‌ನಲ್ಲಿ ಪ್ರದರ್ಶಿಸಲಾದ ಸಂದೇಶವನ್ನು ಎಚ್ಚರಿಕೆಯಿಂದ ಓದಿ.
- ಯಾವತ್ತೂ Anydesk, TeamViewer ಅಥವಾ Screenshareನಂತಹ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.
- Google, Twitter, FB ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ PhonePe ಗ್ರಾಹಕ ಬೆಂಬಲ ನಂಬರ್‌ಗಳಿಗಾಗಿ ಹುಡುಕಬೇಡಿ. PhonePe ಗ್ರಾಹಕ ಬೆಂಬಲವನ್ನು ಸಂಪರ್ಕಿಸುವ ಅಧಿಕೃತ ಮಾರ್ಗವೆಂದರೆ https://phonepe.com/en/contact_us.html ಮೂಲಕ ಸಂಪರ್ಕಿಸುವುದು ಮಾತ್ರ.
- PhonePe ಬೆಂಬಲ ಎಂದು ಹೇಳಿಕೊಳ್ಳುವ ಪರಿಶೀಲಿಸದ ಮೊಬೈಲ್ ನಂಬರ್‌ಗಳಿಗೆ ಎಂದಿಗೂ ಕರೆ ಮಾಡಬೇಡಿ / ಅವುಗಳ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.
ವಂಚಕರು ನಿಮ್ಮನ್ನು ಸಂಪರ್ಕಿಸಿದಾಗ ನೀವು ಏನು ಮಾಡಬೇಕು?
- ಅಂತಹ ಘಟನೆ ನಡೆದಲ್ಲಿ, ತಕ್ಷಣ ನಿಮ್ಮ ಹತ್ತಿರದ ಸೈಬರ್ ಅಪರಾಧ ಕೇಂದ್ರಕ್ಕೆ ವರದಿ ಮಾಡಿ ಮತ್ತು ಪೊಲೀಸರಿಗೆ ಸಂಬಂಧಿತ ವಿವರಗಳನ್ನು (ಫೋನ್ ನಂಬರ್, ವಹಿವಾಟು ವಿವರಗಳು, ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಇತ್ಯಾದಿ) ಒದಗಿಸುವ ಮೂಲಕ FIR ದಾಖಲಿಸಿ.
- ನಿಮ್ಮ PhonePe ಆ್ಯಪ್‌ಗೆ ಲಾಗಿನ್ ಮಾಡಿ ಮತ್ತು ‘ಸಹಾಯ’ ವಿಭಾಗಕ್ಕೆ ಹೋಗಿ. ಅದರಲ್ಲಿ ನೀವು ‘ಖಾತೆ ಭದ್ರತಾ ಸಮಸ್ಯೆ / ವಂಚನೆಯ ಚಟುವಟಿಕೆಯನ್ನು ವರದಿ ಮಾಡಿ’ ವಿಭಾಗದ ಅಡಿಯಲ್ಲಿ ವಂಚನೆ ಘಟನೆಯನ್ನು ವರದಿ ಮಾಡಬಹುದು.
- ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ನಮ್ಮ ಅಧಿಕೃತ ಖಾತೆಗಳ ಮೂಲಕ ಮಾತ್ರ ನಮ್ಮನ್ನು ಸಂಪರ್ಕಿಸಿ.
Twitter ಹ್ಯಾಂಡಲ್‌ಗಳು: https://twitter.com/PhonePe https://twitter.com/PhonePeSupport
Facebook ಖಾತೆ: https://www.facebook.com/OfficialPhonePe/
ವೆಬ್‌ಸೈಟ್: support.phonepe.com