
Trust & Safety
ಗ್ರೂಪ್ ಚಾಟ್‌ಗಳಲ್ಲಿನ ವಂಚನೆಗಳು: ವಂಚಕರು ಹೇಗೆ ನುಸುಳುತ್ತಾರೆ? ಸುರಕ್ಷಿತವಾಗಿರುವುದು ಹೇಗೆ?
PhonePe Regional|2 min read|11 June, 2026
ಹಳೆಯ ಕಾಲದಲ್ಲಿ ಸಂವಹನಕ್ಕಾಗಿ ಟೆಲಿಗ್ರಾಮ್ ಬಳಸುತ್ತಿದ್ದ ಕಥೆಗಳನ್ನು ನಮ್ಮ ಪೋಷಕರು ಮತ್ತು ಅಜ್ಜ-ಅಜ್ಜಿಯರು ಹೇಳಿರುವುದನ್ನು ನಾವು ಕೇಳಿರಬಹುದು. ಟೆಲಿಗ್ರಾಫ್ ಕಚೇರಿಗೆ ಹೋಗಿ ಫಾರ್ಮ್ ಭರ್ತಿ ಮಾಡಿ, ಪ್ರತಿ ಪದಕ್ಕೂ ಹಣ ನೀಡುತ್ತಾ ಸಂದೇಶಗಳನ್ನು ಕಳುಹಿಸುತ್ತಿದ್ದ ಆ ಕಾಲದಲ್ಲಿ, ಇಂದಿನಂತಿರುವ ಇನ್‌ಸ್ಟಂಟ್ ಮೆಸೇಜಿಂಗ್ (ತ್ವರಿತ ಸಂದೇಶ) ವ್ಯವಸ್ಥೆಗಳನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿತ್ತು.
ಸಂವಹನವನ್ನು ಸುಲಭಗೊಳಿಸುವ ಉದ್ದೇಶದಿಂದ ಮೆಸೇಜಿಂಗ್ ಆ್ಯಪ್‌ಗಳು ಮತ್ತು ಪಾವತಿ ಆ್ಯಪ್‌ಗಳಲ್ಲಿನ ಚಾಟ್ ಫೀಚರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ವೈಯಕ್ತಿಕ ಅಥವಾ ವ್ಯವಹಾರದ ಸಂವಹನಗಳಿಗೆ ಮತ್ತು ಪಾವತಿ ಆ್ಯಪ್‌ಗಳ ಮೂಲಕ ಸ್ನೇಹಿತರೊಂದಿಗೆ ವೆಚ್ಚಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಇನ್‌ಸ್ಟಂಟ್ ಮೆಸೇಜಿಂಗ್ ನಾವು ಸಂವಹನ ನಡೆಸುವ ವಿಧಾನವನ್ನೇ ಬದಲಾಯಿಸಿದೆ.
ಆದರೆ ಜನರ ಹಣವನ್ನು ಲೂಟಿ ಮಾಡಲು ವಂಚಕರು ಈಗ ಇಂತಹ ಮೆಸೇಜಿಂಗ್ ಮತ್ತು ಪಾವತಿ ಆ್ಯಪ್‌ಗಳಿಗೂ ನುಸುಳುತ್ತಿದ್ದಾರೆ. ಈ ವಂಚನೆ ಹೇಗೆ ಕೆಲಸ ಮಾಡುತ್ತದೆ ಮತ್ತು ಇಂತಹ ಬಲೆಗೆ ಬೀಳದೆ ನೀವು ಹೇಗೆ ಸುರಕ್ಷಿತವಾಗಿರಬಹುದು ಎಂಬುದನ್ನು ಈ ಬ್ಲಾಗ್ ವಿವರಿಸುತ್ತದೆ.
ಚಾಟ್ ವಂಚನೆಗಳು ಹೇಗೆ ಕೆಲಸ ಮಾಡುತ್ತವೆ?
ಮೆಸೇಜಿಂಗ್ ಮತ್ತು ಪಾವತಿ ಆ್ಯಪ್‌ಗಳ “ಚಾಟ್” ಮತ್ತು “ಗ್ರೂಪ್” ಫೀಚರ್‌ಗಳ ಮೂಲಕ ನಡೆಯುವ ಒಂದು ಸಾಮಾನ್ಯ ವಂಚನೆ ಈ ಕೆಳಗಿನಂತೆ ಸಂಭವಿಸುತ್ತದೆ:
- ಅಪರಿಚಿತ ವ್ಯಕ್ತಿಯಿಂದ ನಿಮಗೆ ಸಂದೇಶ ಬರಬಹುದು ಅಥವಾ ಅವರು ನಿಮ್ಮನ್ನು ದೊಡ್ಡ ಗ್ರೂಪ್‌ವೊಂದಕ್ಕೆ ಸೇರಿಸಬಹುದು.
- ಬೇಗನೆ ಶ್ರೀಮಂತರಾಗುವ ಮಾರ್ಗಗಳು, ಬೆಟ್ಟಿಂಗ್ ಟಿಪ್ಸ್ (ಜುಜಾಟದ ಸಲಹೆಗಳು) ಅಥವಾ ಗ್ಯಾಂಬ್ಲಿಂಗ್ ಆ್ಯಪ್‌ಗಳ ಮೂಲಕ ಸಿಗುವ ದೊಡ್ಡ ರಿವಾರ್ಡ್‌ಗಳಂತಹ ಸಂದೇಶಗಳಿಂದ ಆ ಚಾಟ್ ತುಂಬಿರುತ್ತದೆ.
- ರಿವಾರ್ಡ್‌ಗಳು, ಕ್ಯಾಶ್‌ಬ್ಯಾಕ್ ಅಥವಾ ಗೇಮಿಂಗ್ ಲಿಂಕ್‌ಗಳ ನೆಪದಲ್ಲಿ ವಂಚಕರು ಒಂದು ಲಿಂಕ್ ಅನ್ನು ಹಂಚಿಕೊಳ್ಳುತ್ತಾರೆ.
- ಈ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಫೋನ್‌ನಲ್ಲಿ ಅಪರಿಚಿತ APK ಫೈಲ್ ಒಂದು ಇನ್‌ಸ್ಟಾಲ್ ಆಗುತ್ತದೆ. ಇನ್‌ಸ್ಟಾಲ್ ಆದ ನಂತರ, ಈ ಆ್ಯಪ್ ನಿಮ್ಮ ಫೋನ್‌ನ ಬ್ಯಾಕ್‌ಗ್ರೌಂಡ್‌ನಲ್ಲಿ (ಹಿನ್ನೆಲೆಯಲ್ಲಿ) ಕಾರ್ಯನಿರ್ವಹಿಸಿ ಈ ಕೆಳಗಿನ ಕೆಲಸಗಳನ್ನು ಮಾಡುತ್ತದೆ:
- OTP ಗಳನ್ನು ಫಾರ್ವರ್ಡ್ ಮಾಡುತ್ತದೆ: ನಿಮಗೆ ಬರುವ SMS/OTP ಗಳನ್ನು ಕದ್ದು ವಂಚಕರಿಗೆ ಕಳುಹಿಸುತ್ತದೆ.
- ದಾಖಲೆಗಳನ್ನು ಕದಿಯುತ್ತದೆ: ನಿಮ್ಮ ಫೋನ್‌ನಲ್ಲಿರುವ ಆಧಾರ್, PAN ಕಾರ್ಡ್‌ನಂತಹ ಪ್ರಮುಖ ದಾಖಲೆಗಳ ಫೋಟೋಗಳನ್ನು ಮತ್ತು ಇತರ ಫೈಲ್‌ಗಳನ್ನು ಕದಿಯುತ್ತದೆ.
- ನಿಮ್ಮ OTP ಮತ್ತು ಗುರುತಿನ ಚೀಟಿಗಳು ಸಿಕ್ಕ ತಕ್ಷಣ, ಬ್ಯಾಂಕಿನ ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿ ವಂಚಕರು ನಿಮ್ಮ ಖಾತೆಯಲ್ಲಿರುವ ಪೂರ್ಣ ಹಣವನ್ನು ಲೂಟಿ ಮಾಡುತ್ತಾರೆ. ಅಷ್ಟೇ ಅಲ್ಲದೆ, ನಿಮ್ಮ ಮಾಹಿತಿಯನ್ನು ಬಳಸಿ ನಕಲಿ ಗುರುತುಗಳನ್ನು ಸೃಷ್ಟಿಸಿ ಇತರ ದೊಡ್ಡ ಅಪರಾಧಗಳನ್ನು ಮಾಡಲು ಸಹ ಇದನ್ನು ಬಳಸುತ್ತಾರೆ.
ಗ್ರೂಪ್ ಚಾಟ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ
ಜಾಗರೂಕತೆಯಿಂದ ಬಳಸಿದರೆ ಡಿಜಿಟಲ್ ಪಾವತಿಗಳು ಮತ್ತು ಆ್ಯಪ್‌ಗಳು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ. ಭಯ ಅಥವಾ ಉತ್ಸಾಹದಿಂದಾಗಿ, ಸರಿಯಾಗಿ ಪರಿಶೀಲಿಸದೆ ನಾವು ಗಡಿಬಿಡಿಯಲ್ಲಿ ಕೆಲಸಗಳನ್ನು ಮಾಡಿದಾಗ ಇಂತಹ APK/ನಕಲಿ ಆ್ಯಪ್ ವಂಚನೆಗಳು ಹೆಚ್ಚಾಗಿ ನಡೆಯುತ್ತವೆ. ದೊಡ್ಡ ಆರ್ಥಿಕ ನಷ್ಟದಿಂದ ಪಾರಾಗಲು, ಆ್ಯಪ್‌ಗಳ ಮೂಲ (ಸೋರ್ಸ್), ಡೆವಲಪರ್ ಇಮೇಲ್, ಇನ್‌ಸ್ಟಾಲ್ ಮಾಡುವಾಗ ಕೇಳುವ ಪರ್ಮಿಷನ್‌ಗಳು (ಅನುಮತಿಗಳು) ಮತ್ತು ಲಿಂಕ್‌ಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಸ್ವಲ್ಪ ಸಮಯವನ್ನು ಮೀಸಲಿಡಿ.
ಸೈಬರ್ ವಂಚನೆಯಿಂದ ಸುರಕ್ಷಿತವಾಗಿರಲು ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ:
- ಚಾಟ್‌ಗಳಲ್ಲಿ ಕಳುಹಿಸಲಾದ ಲಿಂಕ್‌ಗಳ ಮೂಲಕ ಎಂದಿಗೂ ಆ್ಯಪ್‌ಗಳನ್ನು ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡಬೇಡಿ. ಇವು ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಮಾಲ್‌ವೇರ್‌ಗಳಾಗಿರಬಹುದು. ಆ್ಯಪ್‌ಗಳನ್ನು ಕೇವಲ Indus ಆ್ಯಪ್‌ಸ್ಟೋರ್, Google ಆ್ಯಪ್‌ಸ್ಟೋರ್ ಅಥವಾ Apple ಆ್ಯಪ್‌ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಿ.
- ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಫೋನ್ ನಂಬರ್‌ಗಳಿಂದ ಬರುವ ಸಂದೇಶಗಳು ಮತ್ತು ನಿಮ್ಮನ್ನು ಸೇರಿಸುವ ಗ್ರೂಪ್‌ಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಿ.
- ನಿಮ್ಮ ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಯಾವ ಆ್ಯಪ್‌ಗಳಿಗೆ “SMS ಓದಲು” ಅಥವಾ “ಫೈಲ್ ಆಕ್ಸೆಸ್ ಮಾಡಲು ಅನುಮತಿ ನೀಡಲಾಗಿದೆ ಎಂಬುದನ್ನು ಆಗಾಗ ಪರಿಶೀಲಿಸಿ.
- ಯಾವುದೇ ಅಧಿಕೃತ ಪ್ಲಾಟ್‌ಫಾರ್ಮ್ ಅಥವಾ ಬ್ಯಾಂಕ್ ಅಧಿಕಾರಿಗಳು ಎಂದಿಗೂ ಚಾಟ್ ಅಥವಾ ಕರೆಯ ಮೂಲಕ ನಿಮ್ಮಿಂದ OTP ಕೇಳುವುದಿಲ್ಲ.
- ಇತರರು ನಿಮ್ಮ ಆ್ಯಪ್‌ಗಳನ್ನು ಅನಧಿಕೃತವಾಗಿ ಬಳಸುವುದನ್ನು ತಡೆಯಲು, ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಲಾಕ್‌ಗಳನ್ನು ಬಳಸಿಕೊಂಡು ಪಾವತಿ ಆ್ಯಪ್‌ಗಳ ಭದ್ರತೆಯನ್ನು ಹೆಚ್ಚಿಸಿ.
ನೀವು ನಕಲಿ ಆ್ಯಪ್ ಇನ್‌ಸ್ಟಾಲ್ ಮಾಡಿದ್ದರೆ ಏನು ಮಾಡಬೇಕು
- ತಕ್ಷಣವೇ ಆ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ.
- ತಾತ್ಕಾಲಿಕವಾಗಿ ಮೊಬೈಲ್ ಡೇಟಾ ಮತ್ತು Wi-Fi ಅನ್ನು ಆಫ್ ಮಾಡಿ.
- ಬ್ಯಾಂಕಿಂಗ್, ಇಮೇಲ್ ಮತ್ತು ಪಾವತಿ ಆ್ಯಪ್‌ಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ.
- ಖಾತೆಯ ಹಣಕಾಸು ವಹಿವಾಟುಗಳನ್ನು ಸ್ಥಗಿತಗೊಳಿಸಲು ಅಥವಾ ಮೇಲ್ವಿಚಾರಣೆ ಮಾಡಲು ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ /ಪಾವತಿ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ.
ವರದಿ ಮಾಡುವುದು ಹೇಗೆ
ನೀವು ವಂಚನೆಗೆ ಒಳಗಾಗಿದ್ದೀರಿ ಎಂದು ಅನುಮಾನ ಬಂದರೆ, ತಕ್ಷಣವೇ ಅದನ್ನು ವರದಿ ಮಾಡಿ:
PhonePe ನಲ್ಲಿ ವರದಿ ಮಾಡುವುದು:
- PhonePe ಗ್ರೂಪ್ ಚಾಟ್: ಗ್ರೂಪ್ ವಂಚನೆಯಿಂದ ಕೂಡಿದೆ ಎಂದು ನಿಮಗೆ ಅನುಮಾನ ಬಂದರೆ, ಗ್ರೂಪ್ ಪ್ರೊಫೈಲ್ ಅಡಿಯಲ್ಲಿರುವ “Exit/ಎಕ್ಸಿಟ್ ಆಗಿ” ಮತ್ತು “Report/ರಿಪೋರ್ಟ್ ಮಾಡಿ” ಆಯ್ಕೆಯನ್ನು ಕ್ಲಿಕ್ ಮಾಡಬಹುದು.
- PhonePe ಆ್ಯಪ್: ‘Help/ಸಹಾಯ’ ವಿಭಾಗಕ್ಕೆ ಹೋಗಿ ದೂರು ನೀಡಿ.
- ಗ್ರಾಹಕ ಬೆಂಬಲ: 80-68727374 / 022-68727374 ಸಂಖ್ಯೆಗೆ ಕರೆ ಮಾಡಿ.
- ಸಾಮಾಜಿಕ ಜಾಲತಾಣಗಳು:
- Twitter: PhonePe Support
- Facebook: PhonePe Official
- ದೂರು ಪರಿಹಾರ: PhonePe ಕುಂದುಕೊರತೆ ಪೋರ್ಟಲ್ನಲ್ಲಿ ದೂರು ದಾಖಲಿಸಿ.
ಅಧಿಕಾರಿಗಳಿಗೆ ವರದಿ ಮಾಡುವುದು:
- ಸೈಬರ್ ಕ್ರೈಮ್: ಸೈಬರ್ ಕ್ರೈಂ ಪೋರ್ಟಲ್ನಲ್ಲಿ ಆನ್‌ಲೈನ್ ದೂರು ನೀಡಿ ಅಥವಾ 1930 ಕ್ಕೆ ಕರೆ ಮಾಡಿ.
- ದೂರಸಂಪರ್ಕ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp / ಟೆಲಿಗ್ರಾಮ್ ವಂಚನೆಯನ್ನು ವರದಿ ಮಾಡಿ.
ಮುಖ್ಯವಾದ ವಿಷಯ — PhonePe ಎಂದಿಗೂ ನಿಮ್ಮ ಖಾಸಗಿ ಅಥವಾ ಗೌಪ್ಯ ವಿವರಗಳನ್ನು (PIN, OTP) ಕೇಳುವುದಿಲ್ಲ. phonepe.com ಡೊಮೇನ್‌ನಿಂದಲ್ಲದಿದ್ದರೆ PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಯಾವುದೇ ಇ-ಮೇಲ್ ಬಂದರೆ ಅದನ್ನು ನಂಬಬೇಡಿ. ನಿಮಗೆ ಅನುಮಾನ ಬಂದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ.
