Trust & Safety
ವ್ಯಾಪಾರೀ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ!
PhonePe Regional|2 min read|29 August, 2019
ವಂಚಕರು ಹಣವನ್ನು ಕದಿಯಲು ನಿರಂತರವಾಗಿ ಹೊಸ ಹೊಸ ಮಾರ್ಗಗಳಿಗಾಗಿ ಹುಡುಕುತ್ತಿರುತ್ತಾರೆ. ಈ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಾಗಿರುವುದರಿಂದಾಗಿ, ವ್ಯಾಪಾರೀ ವಂಚನೆಗಳು ಕೂಡಾ ಹೆಚ್ಚಾಗಿವೆ. ಈ ಬ್ಲಾಗ್ ಬರಹದಲ್ಲಿ ನಾವು ಇಂತಹ ವ್ಯಾಪಾರೀ ವಂಚನೆಗಳಿಂದ ಹೇಗೆ ನಮ್ಮನ್ನು ನಾವು ಸುರಕ್ಷಿತಗೊಳಿಸಿಕೊಳ್ಳುವುದು ಎಂಬ ಕುರಿತು ನೋಡೋಣ.
ಕೆಲವೊಮ್ಮೆ ಗ್ರಾಹಕರು ಆನ್‌ಲೈನ್ ಮೂಲಕ ಖರೀದಿ ಮಾಡಿ ಹಣವನ್ನು ಕೂಡಾ ಪಾವತಿಸಿರುತ್ತಾರೆ. ಆದರೆ, ಅವರಿಗೆ ಆ ಉತ್ಪನ್ನ ತಲುಪುವುದೇ ಇಲ್ಲ. ಇಂತಹ ಘಟನೆಯನ್ನು ವ್ಯಾಪಾರಿ ವಂಚನೆ ಎಂದು ಕರೆಯಬಹುದಾಗಿದೆ! ವಂಚಕರು ನಿಮ್ಮ ಹಣವನ್ನು ಕದಿಯಲು ಯಾವುದೇ ಹಂತಕ್ಕೂ ಹೋಗಬಹುದು. ಅಂದರೆ ಅಂತಹ ವ್ಯಾಪಾರಿ/ಮಾರಾಟಗಾರರು ನಕಲಿ ವೆಬ್‌ಸೈಟ್ ರೂಪಿಸಿ ಉತ್ಪನ್ನಗಳ ವಿವರಗಳನ್ನು ನೀಡುತ್ತಾರೆ. ಆದರೆ, ಇಂತಹ ಕಂಪೆನಿಯ ವಿಳಾಸ, ಸಂಪರ್ಕ ಸಂಖ್ಯೆ, ರದ್ದುಗೊಳಿಸುವಿಕೆ ನೀತಿಗಳು, ಹಿಂದಿರುಗಿಸುವಿಕೆ ಮತ್ತು ಮರುಪಾವತಿ ನೀತಿಗಳು ಮತ್ತು ವಹಿವಾಟಿಗಾಗಿ ಇರುವ ಹಣಪಾವತಿ ವ್ಯವಸ್ಥೆ ಎಲ್ಲಾ ನಕಲಿಗಳಾಗಿರುತ್ತವೆ.
ಆನ್‌ಲೈನ್ ವ್ಯಾಪಾರಿಗಳು ತನ್ನ ಗ್ರಾಹಕರಿಂದ ಹಣ ಪಾವತಿಗಳನ್ನು ಸ್ವೀಕರಿಸಲು ಪೇಮೆಂಟ್ ಗೇಟ್‌ವೇ (ಪಾವತಿ ದ್ವಾರ) ಹೊಂದಿಸಬೇಕಾಗುತ್ತದೆ. ನೀವು ಕಳಿಸುವ ಹಣ ಈ ವ್ಯವಸ್ಥೆಯ ಮೂಲಕವೇ ವ್ಯಾಪಾರಿಗೆ ತಲುಪುತ್ತದೆ. ಆದರೆ, ಇಂತಹ ಪೇಮೆಂಟ್ ಗೇಟ್‌ವೇ ಸೇವಾದಾರರು ಸೇವೆಗಳನ್ನು ಒದಗಿಸುವ ಮೊದಲು ಯಾವುದೇ ಆನ್‌ಲೈನ್ ವ್ಯಾಪಾರಿಗಳ ಹಿನ್ನೆಲೆ ಕುರಿತು ಕೂಲಂಕುಶ ಪರಿಶೀಲನೆಗಳನ್ನು ಮಾಡಬೇಕಾಗುತ್ತದೆ.
ಇಂತಹ ಪ್ರಕ್ರಿಯೆಯಲ್ಲಿ ಸಿಕ್ಕಿಬೀಳದಂತೆ ತಪ್ಪಿಸಿಕೊಳ್ಳಲು, ವ್ಯಾಪಾರಿಯು NEFT ಮೂಲಕ ಹಣವನ್ನು ವರ್ಗಾವಣೆ ಮಾಡಲು ವೈಯಕ್ತಿಕ ಬ್ಯಾಂಕ್ ಖಾತೆಯನ್ನು ಹೊಂದಿಸುತ್ತಾನೆ ಅಥವಾ ವ್ಯಾಪಾರಿ QR ಕೋಡ್ ಬದಲಿಗೆ ವೈಯಕ್ತಿಕ QR ಕೋಡ್ ಬಳಸುತ್ತಾನೆ. ಈ ರೀತಿಯಲ್ಲಿ ವ್ಯಾಪಾರಿ ತನ್ನ ಪಾವತಿ ಗೇಟ್‍ವೇ ಸಕ್ರಮವಾಗಿದೆ ಎಂದು ತೋರಿಸುತ್ತಾನೆ. ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ವ್ಯವಹಾರವನ್ನು ಪ್ರಸಾರ ಮಾಡಿ ಗ್ರಾಹಕರು ಖರೀದಿ ಮಾಡುವಂತೆ ಮಾಡುತ್ತಾನೆ.
ನೆನಪಿರಲಿ: PhonePe ನೋಂದಾಯಿತ ಮತ್ತು ಸಕ್ರಿಯ ಮೊಬೈಲ್ ಸಂಖ್ಯೆ ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ತನ್ನ ಸೇವೆಯನ್ನು ಒದಗಿಸುತ್ತದೆ. ನಮ್ಮ ಸೇವೆ ಪಡೆಯಲು ವ್ಯಾಪಾರಿಗಳು ಕಠಿಣವಾದ ಪರಿಶೀಲನೆ ಪ್ರಕ್ರಿಯೆಗೆ ಒಳಗಾಗುತ್ತಾರೆ. ಅದರಲ್ಲಿ KYC ದಾಖಲೆಗಳ ಪರಿಶೀಲನೆ ಮತ್ತು ಅನಿರೀಕ್ಷಿತ ಅಂಗಡಿ ಭೇಟಿ ಕೂಡಾ ಒಳಗೊಂಡಿವೆ. ಆನಂತರ ಮಾತ್ರವೇ ಅವರು PhonePe ಮೂಲಕ ಪಾವತಿಗಳನ್ನು ಸ್ವೀಕರಿಸಲು ಪ್ರಾರಂಭಿಸಲು ಅವಕಾಶ ನೀಡಲಾಗುತ್ತದೆ. ನೀವು PhonePe ಮೂಲಕ ಪಾವತಿಸಿದಾಗ ನಿಮ್ಮ ಹಣದ ಸುರಕ್ಷತೆ ಬಗ್ಗೆ ಭರವಸೆ ಇರುತ್ತದೆ.
ಬಹುತೇಕ ವ್ಯಾಪಾರಿ ವಂಚನೆ ಪ್ರಕರಣಗಳಲ್ಲಿ, ಗ್ರಾಹಕರು ಪಾವತಿ ಮಾಡಿದ ನಂತರ ಅಥವಾ ತಾವು ಖರೀದಿಸಿದ ಉತ್ಪನ್ನದ ಡೆಲಿವರಿ ದಿನಾಂಕ ದಾಟಿದ ನಂತರವೇ ಮೋಸ ಹೋಗಿರುವುದನ್ನು ಕಂಡುಕೊಳ್ಳುತ್ತಾರೆ. ಅವರು ಸಾಮಾನ್ಯವಾಗಿ ವ್ಯಾಪಾರಿಯ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಗ್ರಾಹಕರ ಬೆಂಬಲ ತಂಡವನ್ನು ಸಂಪರ್ಕಿಸುತ್ತಾರೆ. ಆಗ ಅವರಿಗೆ ತಾವು ಮೋಸ ಹೋಗಿರುವುದು ತಿಳಿಯುತ್ತದೆ.
ಈ ರೀತಿಯ ವಂಚನೆಗಳನ್ನು ನೀವು ತಡೆಯಬಹುದು. ಅದಕ್ಕಾಗಿ ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ:
- ಎಲ್ಲಾ ಶಾಪಿಂಗ್ ವೆಬ್‌ಸೈಟ್‌ಗಳನ್ನು ನಂಬಬೇಡಿ. ಖರೀದಿಸುವ ಮೊದಲು ಗ್ರಾಹಕರ ಪ್ರತಿಕ್ರಿಯೆ, ವಿಮರ್ಶೆಗಳು ಮತ್ತು ವೆಬ್‌ಸೈಟ್‌ಗಳ ಸಾಮಾಜಿಕ ಮಾಧ್ಯಮ ಪುಟಗಳನ್ನು (ಲಭ್ಯವಿದ್ದಲ್ಲಿ) ಪರಿಶೀಲಿಸಿ.
- ವಿಶ್ವಾಸಾರ್ಹ ಶಾಪಿಂಗ್ ವೆಬ್‌ಸೈಟ್‌ಗಳು ಮತ್ತು ಪ್ಲ್ಯಾಟ್‌ಫಾರ್ಮ್‌ಗಳಿಂದ ಮಾತ್ರ ಖರೀದಿಸಿ.
- ಮೋಸದ ವೆಬ್‌ಸೈಟ್ ಕಂಡುಬಂದಲ್ಲಿ ಅದನ್ನು Google ಗೆ ವರದಿ ಮಾಡಿ.
- ನಿಮ್ಮ ಹಣವನ್ನು ಮರಳಿ ಪಡೆಯಲು ಮೋಸದ ವೆಬ್‌ಸೈಟ್‌ಗೆ ಪಾವತಿಸಲು ಬಳಸಿದ ಡೆಬಿಟ್/ಕ್ರೆಡಿಟ್ ಕಾರ್ಡ್, ಬ್ಯಾಂಕ್ ಖಾತೆಗೆ (UPI) ಚಾರ್ಜ್‌ಬ್ಯಾಕ್ ಫೈಲ್ ಮಾಡಿ.