
Trust & Safety
ಸಿಂಥೆಟಿಕ್ ಐಡೆಂಟಿಟಿ ಫ್ರಾಡ್: ನಕಲಿ ಗುರುತುಗಳನ್ನು ಸೃಷ್ಟಿಸಿ ವಂಚನೆ
PhonePe Regional|3 min read|26 May, 2026
ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ಮೀರಿದೆ ಮತ್ತು ಬಿಲ್‌ಗಳು ಬಾಕಿ ಉಳಿದಿವೆ ಎಂದು ಹೇಳುವ ಅನೇಕ ಬ್ಯಾಂಕ್‌ಗಳಿಂದ ನೀವು ಫೋನ್ ಕರೆಗಳನ್ನು ಸ್ವೀಕರಿಸುತ್ತೀರಿ ಎಂದು ಕಲ್ಪಿಸಿಕೊಳ್ಳಿ. ಈ ತಿಂಗಳು ನೀವು ಮಿತಿಯನ್ನು ತಲುಪಿಲ್ಲ ಎಂಬುದು ನಿಮಗೆ ಖಚಿತವಾಗಿ ತಿಳಿದಿರುತ್ತದೆ ಮತ್ತು ಈ ಬಗ್ಗೆ ಬ್ಯಾಂಕ್‌ಗಳಿಗೆ ತಿಳಿಸುತ್ತೀರಿ. ಅನೇಕ ಫೋನ್ ಕರೆಗಳನ್ನು ಸ್ವೀಕರಿಸಿದ ನಂತರ, ನೀವು ಹೆಚ್ಚಿನ ಮಾಹಿತಿಗಾಗಿ ಕೇಳಿದಾಗ, ನಿಮ್ಮ ಫೋನ್ ಸಂಖ್ಯೆ ಮತ್ತು PAN ಅನ್ನು ಇನ್ನೊಬ್ಬ ವ್ಯಕ್ತಿಯ ಗುರುತಿನೊಂದಿಗೆ ವಿಲೀನಗೊಳಿಸಿ ಒಂದು ಕೃತಕ ವ್ಯಕ್ತಿತ್ವವನ್ನು ಸೃಷ್ಟಿಸಲಾಗಿದೆ ಮತ್ತು ಅದರ ಮೂಲಕ ಅನಧಿಕೃತ ಪಾವತಿಗಳನ್ನು ಮಾಡಲಾಗಿದೆ ಎಂದು ನಿಮಗೆ ತಿಳಿಯುತ್ತದೆ. ಇದು ಸಿಂಥೆಟಿಕ್ ಐಡೆಂಟಿಟಿ ಫ್ರಾಡ್‌ನ ಪ್ರಕರಣವಾಗಿದೆ.
ನಿಮ್ಮ ಗುರುತೇ ನಿಮ್ಮ ಅತ್ಯಮೂಲ್ಯ ಆಸ್ತಿ. ಇದು ನೀವು ಮತದಾನ ಮಾಡಲು, ವಾಹನ ಚಲಾಯಿಸಲು, ವಹಿವಾಟು ನಡೆಸಲು, ಪ್ರಯಾಣಿಸಲು, ತೆರಿಗೆ ಪಾವತಿಸಲು ಮತ್ತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ ‘ನೀವಾಗಿ’ ಬದುಕಲು ಈ ಗುರುತು ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ಇತರ ಬೆಲೆಬಾಳುವ ವಸ್ತುಗಳನ್ನು ಕಾಪಾಡಿಕೊಳ್ಳುವಂತೆಯೇ ಇದನ್ನೂ ಸಹ ಸುರಕ್ಷಿತವಾಗಿಟ್ಟುಕೊಳ್ಳುವುದು ಅತ್ಯಗತ್ಯ.
ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕದಿಯಲು ವಂಚಕರು ನಿಮ್ಮ ಗುರುತನ್ನು ದುರುಪಯೋಗಪಡಿಸಿಕೊಳ್ಳುವ ಒಂದು ರೀತಿಯ ವಂಚನೆಯ ಕುರಿತು ಈ ಬ್ಲಾಗ್ ವಿವರಿಸುತ್ತದೆ.
ಸಿಂಥೆಟಿಕ್ ಐಡೆಂಟಿಟಿ ಫ್ರಾಡ್ ಎಂದರೇನು?
ಗುರುತಿನ ಕಳ್ಳತನದಲ್ಲಿ, ವಂಚಕನು ನಿಮ್ಮ ವ್ಯಕ್ತಿತ್ವವನ್ನು ಕದಿಯುವ ಮೂಲಕ ನಿಮ್ಮಂತೆ ನಟಿಸುತ್ತಾನೆ. ಆದರೆ ಸಿಂಥೆಟಿಕ್ ಐಡೆಂಟಿಟಿ ಫ್ರಾಡ್ ಎಂಬುದು ಹೆಚ್ಚು ಸಂಕೀರ್ಣವಾದ ಕಾರ್ಯಾಚರಣೆಯ ವಿಧಾನವಾಗಿದ್ದು, ಇದರಲ್ಲಿ ಸಂಪೂರ್ಣವಾಗಿ ಹೊಸ, ಕಾಲ್ಪನಿಕ ವ್ಯಕ್ತಿಯನ್ನು ರಚಿಸಲು ನೈಜ ಮತ್ತು ನಕಲಿ ಮಾಹಿತಿಯನ್ನು ಸಂಯೋಜಿಸುತ್ತಾರೆ.
ವಂಚಕರು ಆಧಾರ್ ಅಥವಾ PANನಂತಹ ನೈಜ ಗುರುತಿನ ಮಾಹಿತಿಯನ್ನು ಕಾಲ್ಪನಿಕ ಅಥವಾ ಸಂಬಂಧವಿಲ್ಲದ ಹೆಸರುಗಳು ಮತ್ತು ಅಮಾನ್ಯವಾದ ಅಥವಾ ಅಸ್ತಿತ್ವದಲ್ಲಿಲ್ಲದ ವಿಳಾಸದೊಂದಿಗೆ ಸಂಯೋಜಿಸುತ್ತಾರೆ. ಪರಿಣಾಮವಾಗಿ, ವಾಸ್ತವದಲ್ಲಿ ಅಸ್ತಿತ್ವದಲ್ಲಿಲ್ಲದ ಆದರೆ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಮರುಳು ಮಾಡಬಲ್ಲ ಹೊಸ ‘ಗುರುತು’ ಹುಟ್ಟುತ್ತದೆ.
ಸಿಂಥೆಟಿಕ್ ಐಡೆಂಟಿಟಿ ಫ್ರಾಡ್ ಹೇಗೆ ಕೆಲಸ ಮಾಡುತ್ತದೆ?
ವಂಚಕನು ಕಾಲ್ಪನಿಕ ಗುರುತನ್ನು ಸೃಷ್ಟಿಸಿದರೂ ತಕ್ಷಣವೇ ಅದನ್ನು ಬಳಸುವುದಿಲ್ಲ. ಬದಲಾಗಿ, ಅದನ್ನು ವಿಶ್ವಾಸಾರ್ಹವೆಂದು ತೋರಿಸಲು ಅವರು ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಅವರು ಅದನ್ನು ಹೇಗೆ ಮಾಡುತ್ತಾರೆ ಎಂಬುದು ಇಲ್ಲಿದೆ:
- ಅವರು ಕದ್ದ PAN ಅಥವಾ ಆಧಾರ್ ಸಂಖ್ಯೆಯೊಂದಿಗೆ ಪ್ರಾರಂಭಿಸುತ್ತಾರೆ, ಸಾಮಾನ್ಯವಾಗಿ ತಮ್ಮ ಕ್ರೆಡಿಟ್ ಬಗ್ಗೆ ನಿಗಾ ಇಡದ ಹಿರಿಯ ನಾಗರಿಕರಂತಹ ಜನರನ್ನು ಗುರಿಯಾಗಿಸುತ್ತಾರೆ.
- ಅವರು ಸಣ್ಣ ಕ್ರೆಡಿಟ್ ಲೈನ್‌ಗಳು ಅಥವಾ ಸ್ಟೋರ್ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಅದು ತಿರಸ್ಕರಿಸಲ್ಪಟ್ಟರೂ ಸಹ, ಇದು ನಕಲಿ ವ್ಯಕ್ತಿಗೆ ಕ್ರೆಡಿಟ್ ಪ್ರೊಫೈಲ್ ಅನ್ನು ಸೃಷ್ಟಿಸುತ್ತದೆ.
- ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿರ್ಮಿಸಲು ಅವರು ಸಣ್ಣ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾರೆ. ನಂಬಿಕೆಯನ್ನು ಹೆಚ್ಚಿಸಲು ಇತರ ಖಾತೆಗಳಲ್ಲಿ ಕೋ-ಜಾಯಿನಿ ಅಥವಾ ಅಧಿಕೃತ ಬಳಕೆದಾರರಾಗಿ ತಮ್ಮ ವಿವರಗಳನ್ನು ಕೂಡ ಅವರು ಸೇರಿಸಬಹುದು.
- ಕ್ರೆಡಿಟ್ ಮಿತಿಯು ಅವರ ಅಪೇಕ್ಷಿತ ಗರಿಷ್ಠ ಮಿತಿಯನ್ನು ತಲುಪಿದಾಗ, ವಂಚಕನು ಎಲ್ಲಾ ಖಾತೆಗಳಿಂದ ಗರಿಷ್ಠ ಮೊತ್ತದ ಹಣವನ್ನು ಪಡೆದು ಕಣ್ಮರೆಯಾಗುತ್ತಾನೆ.
ವಹಿವಾಟು ನಡೆಸಿದ “ವ್ಯಕ್ತಿ” ಅಸ್ತಿತ್ವದಲ್ಲಿಯೇ ಇಲ್ಲದಿರುವುದರಿಂದ, ಬ್ಯಾಂಕ್‌ಗಳು ಭೂತವನ್ನು ಬೆನ್ನಟ್ಟುವಂತಾಗುತ್ತದೆ.
ವಂಚನೆಯ ನೈಜ ಪ್ರಭಾವವು ಗುರುತು ಕಳುವಾದ ಬಲಿಪಶುಗಳಿಗೆ ಅನುಭವವಾಗುತ್ತದೆ. ನಿಮ್ಮ ಐಡಿಯನ್ನು ಸಿಂಥೆಟಿಕ್ ಐಡೆಂಟಿಟಿ ಫ್ರಾಡ್‌ಗೆ ಆಧಾರವಾಗಿ ಬಳಸಿದ್ದರೆ, ವರ್ಷಗಳವರೆಗೆ ನಿಮಗೆ ಅದರ ಅರಿವೇ ಆಗದಿರಬಹುದು. ನೀವು ಕಾರ್ ಲೋನ್ ಅಥವಾ ವಿದ್ಯಾರ್ಥಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಮತ್ತು ನಿಮ್ಮ PAN ದೊಡ್ಡ ಮೊತ್ತದ “ನಕಲಿ ಸಾಲ/ಘೋಸ್ಟ್ ಡೆಬ್ಟ್” ನೊಂದಿಗೆ ಲಿಂಕ್ ಆಗಿರುವುದರಿಂದ ಅದು ತಿರಸ್ಕರಿಸಲ್ಪಟ್ಟಾಗ ಮಾತ್ರ ನೀವು ವಂಚನೆಗೆ ಬಲಿಯಾಗಿದ್ದೀರಿ ಎಂಬುದು ನಿಮಗೆ ತಿಳಿಯುತ್ತದೆ.
PhonePe ನಿಮ್ಮನ್ನು ಹೇಗೆ ರಕ್ಷಿಸುತ್ತದೆ?
ಇಂತಹ ವಂಚನೆಗಳನ್ನು ಪತ್ತೆಹಚ್ಚಲು PhonePe ಮಾನವ ಮತ್ತು ಕೃತಕ ಬುದ್ಧಿಮತ್ತೆ (AI) ಎರಡರ ಮಧ್ಯಸ್ಥಿಕೆಯನ್ನು ಬಳಸುತ್ತದೆ. ಸಿಂಥೆಟಿಕ್ ಗುರುತುಗಳು ಸಾಮಾನ್ಯವಾಗಿ ಪುನರಾವರ್ತಿತ ಮಾದರಿಗಳು ಮತ್ತು ರಚನೆಯೊಂದಿಗೆ ಯಂತ್ರಗಳಂತೆ ವರ್ತಿಸುತ್ತವೆ. PhonePe ಯ ವ್ಯವಸ್ಥೆಗಳು ಅಂತಹ ನಿದರ್ಶನಗಳನ್ನು ಸುಲಭವಾಗಿ ಪತ್ತೆ ಮಾಡುತ್ತವೆ. ನೈಜ ಬಳಕೆದಾರರು ಸ್ನೇಹಿತರು, ಕುಟುಂಬ ಮತ್ತು ವ್ಯಾಪಾರಿಗಳೊಂದಿಗೆ ಸಂಪರ್ಕ ಹೊಂದಿರುತ್ತಾರೆ. ನೈಜ ಪ್ರಪಂಚದ ಯಾವುದೇ ಲಿಂಕ್‌ಗಳಿಲ್ಲದ ಖಾತೆಯನ್ನು ನಾವು ಗಮನಿಸಿದಾಗ ತಕ್ಷಣವೇ ಎಚ್ಚೆತ್ತುಕೊಳ್ಳುತ್ತೇವೆ. ನಮ್ಮ KYC ಪರಿಶೀಲನಾ ವ್ಯವಸ್ಥೆಯು ನಿಮ್ಮ ಐಡಿಯನ್ನು ಪರಿಶೀಲಿಸುವುದಲ್ಲದೆ, ನಕಲಿ ಗುರುತನ್ನು ಸೃಷ್ಟಿಸಲು ಡಾಕ್ಯುಮೆಂಟ್‌ನಲ್ಲಿರುವ ಯಾವುದೇ ಸಂಖ್ಯೆ ಅಥವಾ ಫೋಟೋವನ್ನು ಡಿಜಿಟಲ್ ರೂಪದಲ್ಲಿ ಬದಲಾಯಿಸಲಾಗಿದೆಯೇ ಅಥವಾ ಸೂಕ್ಷ್ಮ ಬದಲಾವಣೆಗಳಿವೆಯೇ ಎಂದು ಪತ್ತೆಹಚ್ಚುತ್ತದೆ.
ನಿಮ್ಮನ್ನು ನೀವು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬಹುದು?
ಸಿಂಥೆಟಿಕ್ ಐಡೆಂಟಿಟಿ ಫ್ರಾಡ್‌ಗೆ ಬಲಿಯಾಗದಂತೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಿಕೊಳ್ಳುವ ಮಾರ್ಗಗಳು ಇಲ್ಲಿವೆ:
- ನಿಮ್ಮ ಕ್ರೆಡಿಟ್ ಹೆಲ್ತ್ ಮೇಲೆ ಕಣ್ಣಿಡಿ: ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸಿ. ನಿಮಗೆ ತಿಳಿದಿಲ್ಲದ ಸಾಲ ಅಥವಾ ಕ್ರೆಡಿಟ್ ವಿಚಾರಣೆಯನ್ನು ನೀವು ಗಮನಿಸಿದರೆ, ನಿಮ್ಮ ಐಡಿಯನ್ನು ಬೇರೆಡೆ ಬಳಸಲಾಗುತ್ತಿದೆ ಎಂಬುದರ ಎಚ್ಚರಿಕೆಯ ಸಂಕೇತವಾಗಿರಬಹುದು.
- ನಿಮ್ಮ ದಾಖಲೆಗಳನ್ನು ರಕ್ಷಿಸಿ: ನಿಮ್ಮ ಆಧಾರ್ ಮತ್ತು PAN ಅನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಪರಿಶೀಲಿಸದ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ನಿಮ್ಮ ಐಡಿಗಳ ಫೋಟೋಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ.
- ಬಯೋಮೆಟ್ರಿಕ್ ಲಾಕ್‌ಗಳನ್ನು ಸಕ್ರಿಯಗೊಳಿಸಿ: ನಿಮ್ಮ PhonePe ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಸಕ್ರಿಯಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ಭದ್ರತೆಯ ಪ್ರಮುಖ ಪದರವನ್ನು ಸೇರಿಸುತ್ತದೆ.
ನೀವು ವಂಚನೆಗೆ ಬಲಿಯಾಗಿದ್ದರೆ ಏನು ಮಾಡಬೇಕು?
ನೀವು ವಂಚನೆಗೆ ಗುರಿಯಾಗಿದ್ದೀರಿ ಎಂದು ನೀವು ಅನುಮಾನಿಸಿದರೆ, ತಕ್ಷಣವೇ ಅದನ್ನು ವರದಿ ಮಾಡಿ. ಪ್ರತಿಯೊಂದು ಸೆಕೆಂಡು ಕೂಡ ಮುಖ್ಯವಾಗಿರುತ್ತದೆ.
PhonePe ನಲ್ಲಿ ವರದಿ ಮಾಡುವುದು:
- PhonePe ಆ್ಯಪ್: ‘Help/ಸಹಾಯ’ ವಿಭಾಗಕ್ಕೆ ಹೋಗಿ ದೂರು ನೀಡಿ.
- ಗ್ರಾಹಕ ಬೆಂಬಲ: 80-68727374 / 022-68727374 ಸಂಖ್ಯೆಗೆ ಕರೆ ಮಾಡಿ.
- ಸಾಮಾಜಿಕ ಜಾಲತಾಣಗಳು:
- Twitter: PhonePe Support
- Facebook: PhonePe Official
- ದೂರು ಪರಿಹಾರ: PhonePe ಕುಂದುಕೊರತೆ ಪೋರ್ಟಲ್ನಲ್ಲಿ ದೂರು ದಾಖಲಿಸಿ.
ಸರ್ಕಾರಿ ಅಧಿಕಾರಿಗಳಿಗೆ ವರದಿ ಮಾಡುವುದು:
- ಸೈಬರ್ ಕ್ರೈಮ್: ಸೈಬರ್ ಕ್ರೈಂ ಪೋರ್ಟಲ್ನಲ್ಲಿ ಆನ್‌ಲೈನ್ ದೂರು ನೀಡಿ ಅಥವಾ 1930 ಕ್ಕೆ ಕರೆ ಮಾಡಿ.
- ದೂರಸಂಪರ್ಕ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp / ಟೆಲಿಗ್ರಾಮ್ ವಂಚನೆಯನ್ನು ವರದಿ ಮಾಡಿ.
ಮುಖ್ಯವಾದ ವಿಷಯ — PhonePe ಎಂದಿಗೂ ನಿಮ್ಮ ಖಾಸಗಿ ಅಥವಾ ಗೌಪ್ಯ ವಿವರಗಳನ್ನು (PIN, OTP) ಕೇಳುವುದಿಲ್ಲ. phonepe.com ಡೊಮೇನ್‌ನಿಂದಲ್ಲದಿದ್ದರೆ PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಯಾವುದೇ ಇ-ಮೇಲ್ ಬಂದರೆ ಅದನ್ನು ನಂಬಬೇಡಿ. ನಿಮಗೆ ಅನುಮಾನ ಬಂದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ.
