
Trust & Safety
ಹೊಸಬರಿಗೆ ಹಣ ಕಳುಹಿಸುವಾಗ ಇರುವ ಅಪಾಯಗಳನ್ನು ಅರ್ಥಮಾಡಿಕೊಳ್ಳಿ
PhonePe Regional|2 min read|17 September, 2026
ನೀವು ಸೋಶಿಯಲ್ ಮೀಡಿಯಾದಲ್ಲಿ ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳುವ ಕ್ರಯ-ವಿಕ್ರಯ (ಬೈಯರ್-ಸೆಲ್ಲರ್) ಗ್ರೂಪ್‌ನಲ್ಲಿ ಇದ್ದೀರಿ ಎಂದು ಊಹಿಸಿಕೊಳ್ಳಿ. ನಿಮಗೆ ಒಂದು ಮಂಚ ಬೇಕು ಎಂದು ನೀವು ಪೋಸ್ಟ್ ಹಾಕುತ್ತೀರಿ. ಕೆಲವೇ ನಿಮಿಷಗಳಲ್ಲಿ, ಆ ಗ್ರೂಪ್‌ನಲ್ಲಿ ಇಲ್ಲದ ಒಬ್ಬ ವ್ಯಕ್ತಿ ನಿಮಗೆ ನೇರವಾಗಿ ಮೆಸೇಜ್ ಕಳುಹಿಸಿ, ನಿಮಗೆ ಬೇಕಾದ ರೀತಿಯೇ ಮಂಚ ತನ್ನ ಬಳಿ ಇದೆ ಎಂದು ಹೇಳುತ್ತಾನೆ. ಅವನು ನಿಮಗೆ ಕರೆ ಮಾಡಿ, “ಇನ್ನೂ ಅನೇಕ ಜನರು ಇದನ್ನು ಕೊಳ್ಳಲು ಕಾಯುತ್ತಿದ್ದಾರೆ, ಆದ್ದರಿಂದ ತಕ್ಷಣವೇ ಪೂರ್ತಿ ಹಣ ಪಾವತಿಸಿ” ಎಂದು ಒತ್ತಾಯಿಸುತ್ತಾನೆ. ನೀವು ಅವನೊಂದಿಗೆ ಮಾತನಾಡಿ, ಅರ್ಧ ಹಣವನ್ನು ಮುಂಗಡವಾಗಿ (ಅಡ್ವಾನ್ಸ್) ಕೊಟ್ಟು, ಉಳಿದ ಹಣವನ್ನು ಮಂಚ ತಲುಪಿದ ಮೇಲೆ ಕೊಡಲು ಒಪ್ಪಿಕೊಳ್ಳುತ್ತೀರಿ. ಅವನು ಮುಂಗಡ ಹಣ ಕಳುಹಿಸಲು ಒಂದು ನಂಬರ್ ನೀಡುತ್ತಾನೆ. ನೀವು PhonePe ಮೂಲಕ ಹಣ ಕಳುಹಿಸಲು ಹೋದಾಗ ಆಪ್ ನಿಮಗೆ ಎಚ್ಚರಿಕೆ ನೀಡುತ್ತದೆ, ಆದರೂ ನೀವು ಅದನ್ನು ಗಂಭೀರವಾಗಿ ಪರಿಗಣಿಸದೆ ಹಣ ಕಳುಹಿಸಿಬಿಡುತ್ತೀರಿ.
ಈ ರೀತಿಯ ಅಥವಾ ಇದೇ ರೀತಿಯ ಸಂದರ್ಭದಲ್ಲಿ ಏನು ಅನಾಹುತವಾಗಬಹುದು?
ನಾವು ಆಗಾಗ್ಗೆ ಹೊಸ ವ್ಯಕ್ತಿಗಳಿಗೆ ಹಣ ಕಳುಹಿಸುವ ಸಂದರ್ಭಗಳು ಬರುತ್ತವೆ. ಹೊಸ ವಹಿವಾಟುಗಳನ್ನು ಮಾಡುವಾಗ ವಹಿಸಬೇಕಾದ ಜಾಗರೂಕತೆಯನ್ನು ಅರ್ಥಮಾಡಿಕೊಳ್ಳುವುದರಿಂದ ವಂಚನೆಗಳಿಂದ ಪಾರಾಗಬಹುದು ಮತ್ತು ನಿಮ್ಮ ಡಿಜಿಟಲ್ ಪಾವತಿ ಪ್ರಯಾಣವನ್ನು ಸುರಕ್ಷಿತವಾಗಿಡಬಹುದು.
ಈ ವಂಚನೆ ಹೇಗೆ ನಡೆಯುತ್ತದೆ: ಆತುರ ಮತ್ತು ದುರ್ಬಳಕೆ
- ನಕಲಿ ಆತುರತೆಯನ್ನು ಸೃಷ್ಟಿಸುವುದು: ವಂಚಕರು ನಕಲಿ ತುರ್ತು ಪರಿಸ್ಥಿತಿಗಳನ್ನು ಸೃಷ್ಟಿಸುತ್ತಾರೆ. ಆಫರ್ ಮುಗಿದುಹೋಗುತ್ತದೆ, ಸರ್ವಿಸ್ ಸ್ಲಾಟ್ ಕೈತಪ್ಪಿಹೋಗುತ್ತದೆ ಅಥವಾ ತುರ್ತು ರಿಫಂಡ್ ಸಿಗುತ್ತದೆ ಎಂದು ನಂಬಿಸುತ್ತಾರೆ. ಈ ಆತುರತೆಯಿಂದಾಗಿ ನೀವು ಸಾಮಾನ್ಯ ಮುನ್ನೆಚ್ಚರಿಕೆಯನ್ನು ಮರೆತು, ತಕ್ಷಣವೇ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತಾರೆ.
- ಆ್ಯಪ್ ನೀಡುವ ಭದ್ರತಾ ಎಚ್ಚರಿಕೆಗಳನ್ನು ನಿರ್ಲಕ್ಷಿಸುವುದು: ಹಣ ವರ್ಗಾವಣೆಯನ್ನು ಬೇಗನೆ ಪೂರ್ಣಗೊಳಿಸಲು ವಂಚಕರು ಸೃಷ್ಟಿಸುವ ನಕಲಿ ಆತುರತೆಯಿಂದಾಗಿ, ಬಳಕೆದಾರರು PhonePe ಆ್ಯಪ್‌ನಲ್ಲಿ ಬರುವ ಪ್ರಮುಖ ಭದ್ರತಾ ಎಚ್ಚರಿಕೆಗಳನ್ನು ಮತ್ತು ತಮ್ಮ ಸ್ವಂತ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸುತ್ತಾರೆ.
- ಪರಿಶೀಲಿಸದ ಮಾರಾಟಗಾರರಿಂದ ಪೂರ್ತಿ ಮುಂಗಡ ಹಣಕ್ಕೆ ಬೇಡಿಕೆ: Instagram, Telegram ಅಥವಾ ಇತರ ಸೋಶಿಯಲ್ ಆ್ಯಪ್‌ಗಳಲ್ಲಿರುವ ಪರಿಶೀಲಿಸದ ಆನ್‌ಲೈನ್ ಮಾರಾಟಗಾರರು ವಸ್ತುಗಳು ಅಥವಾ ಸೇವೆಗಳನ್ನು ಕಳುಹಿಸುವ ಮೊದಲೇ ಪೂರ್ತಿ ಹಣ ಪಾವತಿಸುವಂತೆ ಒತ್ತಾಯಿಸುತ್ತಾರೆ. ವಹಿವಾಟು ಪೂರ್ಣಗೊಂಡ ನಂತರ, ಅವರು ಯಾವುದೇ ಹೊಣೆಗಾರಿಕೆಯಿಲ್ಲದೆ ಕಣ್ಮರೆಯಾಗಲು ಇದು ಅವಕಾಶ ಮಾಡಿಕೊಡುತ್ತದೆ.
ಒಂದು ಸಣ್ಣ ತಪ್ಪಿನ ನಿಜವಾದ ಪರಿಣಾಮ
- ತಕ್ಷಣದ ಪಾವತಿಗಳು: ನಿಮ್ಮ ಹಣಕಾಸನ್ನು ಸುರಕ್ಷಿತವಾಗಿಡುವುದು ಅತ್ಯಂತ ಮುಖ್ಯ. ಒಮ್ಮೆ ನೀವು UPI ಪಿನ್ ನಮೂದಿಸಿದರೆ, ಹಣ ವರ್ಗಾವಣೆ ಪೂರ್ಣಗೊಂಡಂತೆ ಪರಿಗಣಿಸಲಾಗುತ್ತದೆ. ನಂತರ ಆ ಹಣವನ್ನು ವಿತ್‌ಡ್ರಾ ಮಾಡುವುದು ಅತ್ಯಂತ ಕಷ್ಟದ ಕೆಲಸ ಅಥವಾ ಕೆಲವು ಸಂದರ್ಭಗಳಲ್ಲಿ ಅಸಾಧ್ಯ ಎಂಬುದನ್ನು ನೆನಪಿಡಿ.
- ಹಣಕಾಸಿನ ನಷ್ಟ: ಇಲ್ಲದಿರುವ ಸೇವೆಗಳಿಗೆ, ನಕಲಿ ವಸ್ತುಗಳಿಗೆ ಅಥವಾ ಮೋಸದ ಪ್ರೊಸೆಸಿಂಗ್ ಫೀಸ್‌ಗಾಗಿ ಹಣ ಕಳೆದುಕೊಳ್ಳುವುದು ನಿಜಕ್ಕೂ ಬೇಸರದ ಸಂಗತಿ. ಈ ಹಣವನ್ನು ವಿತ್‌ಡ್ರಾ ಮಾಡಲು (ಚಾರ್ಜ್‌ಬ್ಯಾಕ್ ಪಡೆಯಲು) ಯಾವುದೇ ಹಾದಿ ಇರುವುದಿಲ್ಲ.
ಸುರಕ್ಷಿತ ವಹಿವಾಟಿಗೆ ಕೆಲವು ಪ್ರಾಯೋಗಿಕ ನಿಯಮಗಳು
- ಆತುರತೆಯನ್ನು ಯಾವಾಗಲೂ ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಿ: ನಿಜವಾದ ವ್ಯಕ್ತಿಗಳು ಅಥವಾ ಅಧಿಕೃತ ಸಂಸ್ಥೆಗಳು ವಿವರಗಳನ್ನು ಪರಿಶೀಲಿಸಲು ಸಮಯ ನೀಡದೆ ತಕ್ಷಣದ ಹಣ ವರ್ಗಾವಣೆಗೆ ಎಂದಿಗೂ ಒತ್ತಾಯಿಸುವುದಿಲ್ಲ. ಆತುರ ಪಡಿಸುವುದೇ ಅಪಾಯದ ಮೊದಲ ಮತ್ತು ಸ್ಪಷ್ಟ ಸೂಚನೆಯಾಗಿದೆ.
- ಪ್ರತಿಯೊಂದು ಬಾರಿಯೂ ಹೆಸರನ್ನು ಕ್ರಾಸ್-ಚೆಕ್ ಮಾಡಿ: ಪಾವತಿ ಮಾಡುವ ಮೊದಲು, ಕನ್ಫರ್ಮೇಶನ್ ಸ್ಕ್ರೀನ್‌ನಲ್ಲಿ ಕಾಣಿಸುವ ನೋಂದಾಯಿತ ಹೆಸರನ್ನು ಗಮನಿಸಿ. ನೀವು ಹಣ ಕಳುಹಿಸಲು ಬಯಸಿರುವ ವ್ಯಕ್ತಿ ಅಥವಾ ಸಂಸ್ಥೆಯ ಹೆಸರಿಗೆ ಅದು ತಾಳೆಯಾಗದಿದ್ದರೆ, ತಕ್ಷಣ ವಹಿವಾಟನ್ನು ರದ್ದುಗೊಳಿಸಿ.
- ಸಾಮಾನ್ಯ ಅಕ್ಷರ ದೋಷಗಳು/ಸಂಖ್ಯೆಯ ತಪ್ಪುಗಳನ್ನು ಪರಿಶೀಲಿಸಿ: ಮೊದಲ ಬಾರಿಗೆ ಪಾವತಿ ಮಾಡುವಾಗ ವಿವರಗಳನ್ನು ಮರುಪರಿಶೀಲಿಸುವುದು ಅತ್ಯಂತ ಮುಖ್ಯ. ಏಕೆಂದರೆ UPI ಪಾವತಿಯು ತಕ್ಷಣವೇ ನಡೆಯುತ್ತದೆ ಮತ್ತು ಇದನ್ನು ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ.
- ಹಣ ಪಡೆಯಲು ಯಾವುದೇ ಕ್ರಿಯೆಯ ಅಗತ್ಯವಿಲ್ಲ: ನಿಯಮ ಸರಳವಾಗಿದೆ – ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಸ್ವೀಕರಿಸಲು ನೀವು ಯಾವುದೇ QR ಕೋಡ್ ಸ್ಕ್ಯಾನ್ ಮಾಡಬೇಕಾಗಿಲ್ಲ, UPI ಪಿನ್ ನಮೂದಿಸಬೇಕಾಗಿಲ್ಲ ಅಥವಾ OTP ಹಂಚಿಕೊಳ್ಳಬೇಕಾಗಿಲ್ಲ.
- ಆ್ಯಪ್ ಪಾಪ್-ಅಪ್‌ಗಳು ಮತ್ತು ನೋಟಿಫಿಕೇಶನ್‌ಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ: ನಿಮ್ಮ ಪಾವತಿ ಆ್ಯಪ್ ಯಾವುದಾದರೂ ಖಾತೆಯನ್ನು ‘ಹೈ-ರಿಸ್ಕ್’ ಅಥವಾ ಇತ್ತೀಚೆಗೆ ರಚಿಸಲಾದ ಖಾತೆ ಎಂದು ಫ್ಲ್ಯಾಗ್ ಮಾಡಿದರೆ, ಆ ಎಚ್ಚರಿಕೆಯನ್ನು ನಿರ್ಲಕ್ಷಿಸುವ ಬದಲು ತಕ್ಷಣ ಪಾವತಿ ನಿಲ್ಲಿಸಿ ವಿವರಗಳನ್ನು ಮರುಪರಿಶೀಲಿಸಿ. PhonePe ರೀತಿಯ ಆ್ಯಪ್‌ಗಳು ಹೈ-ರಿಸ್ಕ್ ಸಂಖ್ಯೆಗಳು, ಸ್ಪ್ಯಾಮ್ ಟ್ಯಾಗ್ ಅಥವಾ ಇತ್ತೀಚೆಗೆ ತೆರೆದ ಖಾತೆಗಳಿಗಾಗಿ ಪಾಪ್-ಅಪ್ ಎಚ್ಚರಿಕೆಗಳನ್ನು ಸಕ್ರಿಯವಾಗಿ ತೋರಿಸುತ್ತವೆ.
- ಮೊದಲ ಬಾರಿಗೆ ಹಣ ಪಾವತಿಸುವಾಗ ಸಂಪೂರ್ಣ ಮೊತ್ತವನ್ನು ಪಾವತಿಸಬೇಡಿ: ಹೊಸಬರಿಗೆ ಪಾವತಿ ಮಾಡುವಾಗ ಹಂತ-ಹಂತದ ಪಾವತಿ , ಪೇ-ಆನ್-ಡೆಲಿವರಿ ಆಯ್ಕೆ ಮಾಡಿ ಅಥವಾ ಸ್ಪಷ್ಟ ಖರೀದಿದಾರರ ರಕ್ಷಣೆ ನೀತಿಯನ್ನು ಹೊಂದಿರುವ ಪ್ರಸಿದ್ಧ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ.
ಯಾವುದೇ ವಹಿವಾಟಿನ ಸಂದರ್ಭದಲ್ಲೂ ಅನುಮಾನಸ್ಪದ ಸಂಗತಿಗಳನ್ನು ಸೂಚಿಸುವ ಸ್ಪಷ್ಟ ಕುರುಹುಗಳಿರುತ್ತವೆ – ಸರಿಯಾದ ಮಾಹಿತಿಯನ್ನು ಹೊಂದಿರುವುದು ಮತ್ತು ಮುಂದೆ ಏನು ಮಾಡಬೇಕೆಂದು ತಿಳಿಯುವುದಷ್ಟೇ ಇಲ್ಲಿ ಮುಖ್ಯವಾಗಿದೆ!
ನೀವು ವಂಚನೆಗೆ ಒಳಗಾಗಿದ್ದರೆ ಏನು ಮಾಡಬೇಕು?
ನೀವು ವಂಚನೆಗೆ ಗುರಿಯಾಗಿದ್ದೀರಿ ಎಂದು ಅನುಮಾನವಿದ್ದರೆ, ತಕ್ಷಣವೇ ಅದನ್ನು ವರದಿ ಮಾಡಿ. ಪ್ರತಿ ಕ್ಷಣವೂ ಮುಖ್ಯವಾಗಿರುತ್ತದೆ.
PhonePe ನಲ್ಲಿ ವರದಿ ಮಾಡುವುದು:
- PhonePe ಗ್ರಾಹಕ ಸೇವೆ: 080-68727374 / 022-68727374 ಗೆ ಕರೆ ಮಾಡಿ.
- ಲಾಗಿನ್ ಹಂತದ ತೊಂದರೆಗಳು : https://support.phonepe.com/ ಮೂಲಕ ಸಪೋರ್ಟ್ ಟಿಕೆಟ್ ರಚಿಸಿ.
- ಸಾಮಾಜಿಕ ಜಾಲತಾಣಗಳು:
- Twitter: PhonePe Support
- Facebook: PhonePe Official
- ದೂರು ಪರಿಹಾರ: PhonePe ಕುಂದುಕೊರತೆ ಪೋರ್ಟಲ್ನಲ್ಲಿ ದೂರು ದಾಖಲಿಸಿ.
ಅಧಿಕಾರಿಗಳಿಗೆ ವರದಿ ಮಾಡುವುದು:
- ಸೈಬರ್ ಕ್ರೈಮ್: ಸೈಬರ್ ಕ್ರೈಂ ಪೋರ್ಟಲ್ನಲ್ಲಿ ಆನ್‌ಲೈನ್ ದೂರು ನೀಡಿ ಅಥವಾ 1930 ಕ್ಕೆ ಕರೆ ಮಾಡಿ.
- ದೂರಸಂಪರ್ಕ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp / ಟೆಲಿಗ್ರಾಮ್ ವಂಚನೆಯನ್ನು ವರದಿ ಮಾಡಿ.
ಮುಖ್ಯವಾದ ವಿಷಯ — PhonePe ಎಂದಿಗೂ ನಿಮ್ಮ ಖಾಸಗಿ ಅಥವಾ ಗೌಪ್ಯ ವಿವರಗಳನ್ನು (PIN, OTP) ಕೇಳುವುದಿಲ್ಲ. phonepe.com ಡೊಮೇನ್‌ನಿಂದಲ್ಲದಿದ್ದರೆ PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಯಾವುದೇ ಇ-ಮೇಲ್ ಬಂದರೆ ಅದನ್ನು ನಂಬಬೇಡಿ. ನಿಮಗೆ ಅನುಮಾನ ಬಂದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ.
